ಉಳ್ಳಾಲ: ಶಿವಗಿರಿ ಮಾಡೂರು, ಮರಿಯಾನ ಪಾಳು, ಕೋಟೆಕಾರು ಉಳ್ಳಾಲದ ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ನವರಾತ್ರಿ ಹಾಗೂ ಶರನ್ನವರಾತ್ರಿ ಪ್ರಯುಕ್ತ ಅಕ್ಟೋಬರ್ 15ರಿಂದ 19ರವರೆಗೆ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.
ಶ್ರೀ ಶಿವ ದುರ್ಗಾಂಬಾ ಕ್ಷೇತ್ರ ನಡೆಯಲಿರುವ ಐದು ದಿನಗಳ ನವರಾತ್ರಿ ಮಹೋತ್ಸವದಲ್ಲಿ ವಿಶೇಷ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ರುದ್ರಾಭಿಷೇಕ, ರುದ್ರಪಾರಾಯಣ, ಮಹಾ ಚಂಡಿಕಾಯಾಗ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಅಖಂಡ ಭಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ಆಡಳಿತ ಮೊಕ್ತೇಸರರು ಹಾಗೂ ಪದಾಧಿಕಾರಿಗಳು ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅ.15ರಿಂದ 17ರವರೆಗೆ ವಿಶೇಷ ಪೂಜೆ
ನವರಾತ್ರಿ ಮಹೋತ್ಸವದ ಮೊದಲ ಮೂರು ದಿನಗಳಾದ ಅ.15, 16 ಹಾಗೂ 17ರಂದು ಶ್ರೀ ದುರ್ಗಾಂಬೆ ಅಮ್ಮನವರಿಗೆ ವಿಶೇಷ ದುರ್ಗಾನಮಸ್ಕಾರ ಪೂಜೆ, ನವರಾತ್ರಿ ಪೂಜೆ ಹಾಗೂ ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ಅ.18ರಂದು ಗಣಹೋಮ, ಸತ್ಯನಾರಾಯಣ ಪೂಜೆ
ಅ.18ರಂದು ಬೆಳಗ್ಗೆ 6.30ಕ್ಕೆ ಗಣಹೋಮ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಬಳಿಕ ಮಹಾಪೂಜೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸಂಜೆ 5.30ಕ್ಕೆ ಸಾರ್ವಜನಿಕ ಲಕ್ಷ್ಮೀ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.19ರಂದು ಮಹಾ ಚಂಡಿಕಾಯಾಗ
ನವರಾತ್ರಿ ಮಹೋತ್ಸವದ ಪ್ರಮುಖ ದಿನವಾದ ಅ.19ರಂದು ಬೆಳಗ್ಗೆ 6.30ಕ್ಕೆ ಎರಡು ತೆಂಗಿನಕಾಯಿ ಗಣಹೋಮ, ರುದ್ರಾಭಿಷೇಕ ಹಾಗೂ ರುದ್ರಪಾರಾಯಣ ನೆರವೇರಲಿದೆ. ಬೆಳಗ್ಗೆ 10 ಗಂಟೆಗೆ ಮಹಾ ಚಂಡಿಕಾಯಾಗ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿಶೇಷ ಧಾರ್ಮಿಕ ಸಭೆ ಆಯೋಜಿಸಲಾಗಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಿ ಆಶೀರ್ವಚನ ಹಾಗೂ ಸಂದೇಶ ನೀಡಲಿದ್ದಾರೆ.
ಸೂರ್ಯೋದಯದಿಂದ ಸೂರ್ಯೋದಯದವರೆಗೆ ಅಖಂಡ ಭಜನೆ
ಅ.19ರಂದು ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗೆ ಅಖಂಡ ಭಜನೋತ್ಸವ ನಡೆಯಲಿದೆ. ವಿವಿಧ ಭಜನಾ ತಂಡಗಳು ಹಾಗೂ ಭಕ್ತರು ಭಾಗವಹಿಸಿ ದೇವಿಯ ನಾಮಸ್ಮರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಧಾರ್ಮಿಕ ಜಾಗೃತಿ–ಸಮಾಜಮುಖಿ ಸೇವೆಗೆ ಆದ್ಯತೆ
ಕ್ಷೇತ್ರದ ಯತಿವರ್ಯರಾದ ಶಿವಯೋಗಿ ಶ್ರೀ ದುರ್ಗಾನಂದ ಸ್ವಾಮೀಜಿ ಮಾತನಾಡಿ, ತುಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉದ್ದೇಶದಿಂದ ಕ್ಷೇತ್ರದಲ್ಲಿ ನಿರಂತರವಾಗಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಭಕ್ತರಲ್ಲಿ ಧಾರ್ಮಿಕ ಜಾಗೃತಿ, ಸೇವಾ ಮನೋಭಾವ ಹಾಗೂ ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆಯರು, ಯುವಕರು ಸೇರಿದಂತೆ ಸಾರ್ವಜನಿಕರನ್ನು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ ಎಂದರು.
ನವರಾತ್ರಿ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಪರಾಶಕ್ತಿ ದುರ್ಗಾಂಬೆ ಅಮ್ಮನವರ ಆಶೀರ್ವಾದ ಹಾಗೂ ಕೃಪೆಗೆ ಪಾತ್ರರಾಗಬೇಕು. ಕ್ಷೇತ್ರದ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಭಕ್ತರು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಉಚ್ಚಿಲ್ ಮಾತನಾಡಿ, ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಯಶವಂತ ಆಳ್ವ, ಟ್ರಸ್ಟಿ ಜನಾರ್ಧನ್ ಬಳ್ಳಾಲ್, ಗೌರವ ಸಲಹೆಗಾರ ಯೋಗೀಶ್ ಶೆಟ್ಟಿ ಜಪ್ಪು, ಮಹಿಳಾ ಸಮಿತಿ ಅಧ್ಯಕ್ಷೆ ಅಮಿತಾ ಅಶ್ವಿನ್ ಬಂಡಿಕೊಟ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಬಬಿತಾ ಉಳ್ಳಾಲ್ ಉಪಸ್ಥಿತರಿದ್ದರು.

