ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಗ್ರಂಥಪಾಲಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿನ ಗ್ರಂಥಪಾಲಕರ ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿ ನಿಯಮಗಳು (C&R) ಮತ್ತು ಶೈಕ್ಷಣಿಕ ವಿದ್ಯಾರ್ಹತೆಯನ್ನು ಸಮರ್ಪಕವಾಗಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘವು ಅಕ್ಟೋಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಶಾಂತಿಯುತ ಹಾಗೂ ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ರಾಜ್ಯದ ಶಾಲಾ-ಕಾಲೇಜುಗಳು, ಸಾರ್ವಜನಿಕ ಗ್ರಂಥಾಲಯಗಳು, ಪದವಿ ಕಾಲೇಜುಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಗ್ರಂಥಪಾಲಕರ ಹುದ್ದೆಗಳು ದೀರ್ಘಕಾಲದಿಂದ ಖಾಲಿ ಇದ್ದರೂ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರಿಗೆ ಗ್ರಂಥಾಲಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸಲು ತೊಂದರೆಯಾಗುತ್ತಿದೆ.
ಸುಮಾರು 18 ವರ್ಷಗಳಿಂದ ರಾಜ್ಯದಲ್ಲಿ ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವ ಹಿನ್ನೆಲೆಯಲ್ಲಿ, ಅರ್ಹ ಗ್ರಂಥಪಾಲಕರ ನೇಮಕಾತಿಯನ್ನು ತಕ್ಷಣದಿಂದಲೇ ಆರಂಭಿಸಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಈ ಪ್ರತಿಭಟನೆ ಆಯೋಜಿಸಲಾಗಿದೆ.
ಇದೇ ವೇಳೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಗ್ರಂಥಪಾಲಕರ ಹುದ್ದೆಗೆ ಸಂಬಂಧಿಸಿದ C&R ನಿಯಮಗಳು ಹಾಗೂ ವಿದ್ಯಾರ್ಹತೆಯಲ್ಲಿ ಅಗತ್ಯ ತಿದ್ದುಪಡಿ ಮಾಡುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸಂಘವು ಸರ್ಕಾರವನ್ನು ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಗ್ರಂಥಾಲಯ ಕ್ಷೇತ್ರದ ಸಮಸ್ಯೆಗಳಿಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆಯನ್ನು ಶಾಂತಿಯುತ ಹಾಗೂ ಮೌನ ರೀತಿಯಲ್ಲಿ ನಡೆಸಲಾಗುತ್ತಿದೆ.
ಈ ಪ್ರತಿಭಟನೆಗೆ ಕರ್ನಾಟಕ ಸರ್ಕಾರಿ ಆರೋಗ್ಯ ವಿಜ್ಞಾನಗಳ ಗ್ರಂಥಪಾಲಕರ ಸಂಘ (KGHSLA) ತನ್ನ ಸಂಪೂರ್ಣ ಸಹಮತ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಅನುಮತಿಯೊಂದಿಗೆ ಪ್ರತಿಭಟನೆಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು KGHSLA ಸಂಘದ ಕಾರ್ಯದರ್ಶಿ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಗ್ರಂಥಪಾಲಕ ಡಾ. ಸ್ವಾಮಿ ನಾಯಕ ಸಿ.ಕೆ. ತಿಳಿಸಿದ್ದಾರೆ.
ರಾಜ್ಯದ ಗ್ರಂಥಾಲಯ ವ್ಯವಸ್ಥೆಯ ಬಲವರ್ಧನೆ, ಖಾಲಿ ಹುದ್ದೆಗಳ ಭರ್ತಿ ಹಾಗೂ ಅರ್ಹ ಗ್ರಂಥಪಾಲಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗ್ರಂಥಾಲಯಗಳು ಜ್ಞಾನ ಮತ್ತು ಶಿಕ್ಷಣದ ಪ್ರಮುಖ ಕೇಂದ್ರಗಳಾಗಿರುವ ಹಿನ್ನೆಲೆಯಲ್ಲಿ, ಅವುಗಳ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

