ಉಡುಪಿ/ಮಣಿಪಾಲ: ಜನಸಾಮಾನ್ಯರು ಹಾಗೂ ವ್ಯಾಪಾರಸ್ಥರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಇಂದು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಉಡುಪಿ ಯುವ ಉದ್ಯಮಿ ಹಾಗೂ ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ಮತ್ತು ಬಾಂಬೆ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸದಸ್ಯರಾದ ಶ್ರೀ ಸುಶಾಂತ್ ಬ್ರಹ್ಮಾವರ ಅವರು ಉಡುಪಿ ಎಪಿಎಂಸಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಿಜ್ವಾನ್ ಅರ್ಷದ್ ಅವರ ಗಮನಕ್ಕೆ ನೇರವಾಗಿ ತಂದರು.
ಉಡುಪಿ ಎಪಿಎಂಸಿ ವ್ಯಾಪ್ತಿಯಲ್ಲಿ ಅಂಗಡಿಗಳ ಹಂಚಿಕೆ ಮತ್ತು ಗುತ್ತಿಗೆಗೆ ಸಂಬಂಧಿಸಿದಂತೆ ಉಪಗುತ್ತಿಗೆ (Sub-contract/Sub-lease) ಪದ್ಧತಿಯನ್ನು ನಿಲ್ಲಿಸಿ, ಬಿಡ್ನಲ್ಲಿ ಯಶಸ್ವಿಯಾದ ಬಿಡ್ಡರ್ಗಳಿಗೆ ಸರ್ಕಾರದ ನಿಯಮಾನುಸಾರ ನೇರವಾಗಿ ಅಂಗಡಿ ಅಥವಾ ವಾಣಿಜ್ಯ ಸ್ಥಳವನ್ನು ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯಶಸ್ವಿಯಾದ ವ್ಯಕ್ತಿಗಳಿಗೆ ನೇರವಾಗಿ ಹಕ್ಕು ನೀಡುವ ಬದಲು ಮಧ್ಯವರ್ತಿ ಅಥವಾ ಉಪಗುತ್ತಿಗೆ ವ್ಯವಸ್ಥೆ ಉಂಟಾದರೆ, ಅದು ಹೆಚ್ಚುವರಿ ಆರ್ಥಿಕ ಹೊರೆ ಹಾಗೂ ಅನಗತ್ಯ ಗೊಂದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ವ್ಯವಸ್ಥೆಗಾಗಿ ಉಪಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಅರ್ಹ ಬಿಡ್ಡರ್ಗಳಿಗೆ ನೇರವಾಗಿ ಅಂಗಡಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸುಶಾಂತ್ ಬ್ರಹ್ಮಾವರ ಅವರು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಉಡುಪಿ ಕ್ಷೇತ್ರದ ಶಾಸಕ ಶ್ರೀ ಯಶ್ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಂ.ಎ. ಗಫೂರ್, ದಿನಕರ್ ಹೇರೂರು, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ವಿಷಯದ ಕುರಿತು ಚರ್ಚೆ ನಡೆಯಿತು.
ಜನಸಾಮಾನ್ಯರು ಹಾಗೂ ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀ ಫ್ರಾಂಕಿ ಡಿಸೋಜ ಕೊಳಲಗಿರಿ ಹಾಗೂ ಸಂಘಟನೆಯ ಮುಖಂಡರು ಕೂಡ ಸುಶಾಂತ್ ಬ್ರಹ್ಮಾವರ ಅವರ ಬೇಡಿಕೆಗೆ ಬೆಂಬಲವಾಗಿ ನಿಂತರು.
ಪಾರದರ್ಶಕ ವ್ಯವಸ್ಥೆಗೆ ಆಗ್ರಹ
ಎಪಿಎಂಸಿ ವ್ಯಾಪಾರ ವಹಿವಾಟಿನಲ್ಲಿ ಪಾರದರ್ಶಕತೆ, ನೇರ ಹಕ್ಕು ಮತ್ತು ಸಮಾನ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಸರ್ಕಾರದ ನಿಯಮಾನುಸಾರ ಬಿಡ್ಡಿಂಗ್ ಮೂಲಕ ಅಂಗಡಿ ಪಡೆದವರಿಗೆ ಯಾವುದೇ ಮಧ್ಯವರ್ತಿ ವ್ಯವಸ್ಥೆಯಿಲ್ಲದೆ ನೇರವಾಗಿ ಅಂಗಡಿ ಹಸ್ತಾಂತರಿಸುವುದರಿಂದ ವ್ಯಾಪಾರಸ್ಥರಿಗೆ ಅನುಕೂಲವಾಗುವುದರ ಜೊತೆಗೆ ಆಡಳಿತಾತ್ಮಕ ಗೊಂದಲಕ್ಕೂ ಕಡಿವಾಣ ಬೀಳಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಜನಸಾಮಾನ್ಯರ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು, ಅವುಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಮುಂದೆಯೂ ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದು ಸುಶಾಂತ್ ಬ್ರಹ್ಮಾವರ ಹಾಗೂ ತುಳುನಾಡು ರಕ್ಷಣಾ ವೇದಿಕೆಯ ಮುಖಂಡರು ತಿಳಿಸಿದ್ದಾರೆ.

