ಮಂಗಳೂರು, ಜುಲೈ 31: ಜನತಾದಳ (ಜಾತ್ಯತೀತ) ಪಕ್ಷದ ಮೀನುಗಾರ ಘಟಕದ ರಾಜ್ಯಾಧ್ಯಕ್ಷರಾದ ರತ್ನಾಕರ್ ಸುವರ್ಣ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮರಣ ಸುದ್ದಿಯನ್ನು ಅವರ ಭಾವಚಿತ್ರದೊಂದಿಗೆ ಹರಿಬಿಟ್ಟು ಮಾನಹಾನಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಅತ್ಯಂತ ಖಂಡನೀಯ ಎಂದು ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ರತ್ನಾಕರ್ ಸುವರ್ಣ ಅವರು ಮೃತಪಟ್ಟಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವ ಪರಿಣಾಮ ಅವರ ಕುಟುಂಬದ ಸದಸ್ಯರು, ಸಂಬಂಧಿಕರು, ಸ್ನೇಹಿತರು, ಪಕ್ಷದ ಮುಖಂಡರು ಹಾಗೂ ಹಿತೈಷಿಗಳು ತೀವ್ರ ಆತಂಕ ಮತ್ತು ಗೊಂದಲಕ್ಕೆ ಒಳಗಾಗಿದ್ದಾರೆ. ಇಂತಹ ದುರುದ್ದೇಶಪೂರಿತ ಕೃತ್ಯಗಳು ವ್ಯಕ್ತಿಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವುದಲ್ಲದೆ, ಸಮಾಜದಲ್ಲಿ ಸುಳ್ಳು ಸುದ್ದಿಗಳಿಗೆ ಉತ್ತೇಜನ ನೀಡುವ ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡಿ ಸುಳ್ಳು ಮಾಹಿತಿ ಹರಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಯಾವುದೇ ರೀತಿಯ ಮೃದು ಧೋರಣೆ ಅನುಸರಿಸಬಾರದು. ಸೈಬರ್ ತಾಂತ್ರಿಕ ತನಿಖೆಯ ಮೂಲಕ ಈ ಕೃತ್ಯದ ಹಿಂದಿರುವ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ, ಭಾರತೀಯ ನ್ಯಾಯ ಸಂಹಿತೆ (BNS), ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಸೇರಿದಂತೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ರತ್ನಾಕರ್ ಸುವರ್ಣ ಅವರು ದಕ್ಷಿಣ ಮಂಗಳೂರು ಪೊಲೀಸ್ ಆಯುಕ್ತರರಿಗೆ ಅಧಿಕೃತ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಬೇಕು ಎಂದು ಯೋಗಿಶ್ ಶೆಟ್ಟಿ ಜಪ್ಪು ಒತ್ತಾಯಿಸಿದ್ದಾರೆ.
ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಯನ್ನು ಪರಿಶೀಲಿಸದೆ ಹಂಚಿಕೊಳ್ಳುವುದನ್ನು ಸಾರ್ವಜನಿಕರು ತಪ್ಪಿಸಬೇಕು ಹಾಗೂ ಇಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವವರ ವಿರುದ್ಧ ಜಾಗೃತಿಯಿಂದ ವರ್ತಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

