ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಅಧಿಕೃತ ಭಾಷೆಯ ಸ್ಥಾನ ಪಡೆದಿರುವ ತುಳು ಭಾಷೆಗೆ ಇದೀಗ ರಾಷ್ಟ್ರೀಯ ಮಟ್ಟದ ಮತ್ತೊಂದು ಅಪರೂಪದ ಗರಿಮೆ ಲಭಿಸಿದೆ. ಒಟ್ಟು ಎಂಟು ಭಾಷೆಗಳಲ್ಲಿ ದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬಹುಭಾಷಾ ಕವಿಗೋಷ್ಟಿಯಲ್ಲಿ ತುಳು ಭಾಷೆಯನ್ನು ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ಯಶಸ್ವಿಯಾಗಿ ಪ್ರತಿನಿಧಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾಷೆಯ ಹಿರಿಮೆಯನ್ನು ಎತ್ತಿಹಿಡಿದರು.

ನವದೆಹಲಿ:
ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ (IIC) ಆಯೋಜಿಸಿದ್ದ “ದ ವರ್ಲ್ಡ್ ವಿದಿನ್ ದ ವರ್ಡ್”ಶೀರ್ಷಿಕೆಯಡಿ ಪ್ರಕೃತಿ ವಿಷಯದ ಮೇಲೆ ಅಕ್ಟೋಬರ್ 31, 2026ರ ಶನಿವಾರದಂದು ನಡೆದ ರಾಷ್ಟ್ರೀಯ ಮಟ್ಟದ ಕಾವ್ಯ ವಾಚನ ಗೋಷ್ಠಿಯಲ್ಲಿ ಒಟ್ಟು ಎಂಟು ಭಾಷೆಗಳು ಆಯ್ಕೆಯಾಗಿದ್ದು, ಅದರಲ್ಲಿ ತುಳು ಭಾಷೆಗೆ ಸ್ಥಾನ ಸಿಕ್ಕಿರುವುದು ರಾಷ್ಟ್ರೀಯ ಗರಿಮೆಯಾಗಿದೆ.
ಇಂಗ್ಲೀಷ್, ಸಂಸ್ಕೃತ, ಉರ್ದು, ಹಿಂದಿ, ಬಂಗಾಳಿ, ಮಣಿಪುರಿ, ತೆಲುಗು ಭಾಷೆಗಳ ಜೊತೆಗೆ ತುಳು ಭಾಷೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಭಾರತದ ವಿವಿಧ ಭಾಗಗಳ ಪ್ರಮುಖ ಕವಿಗಳು ರಚಿಸಿದ ಪ್ರಕೃತಿ ಕುರಿತ ಕವನಗಳನ್ನು ಮೂಲ ಭಾಷೆಗಳಲ್ಲೇ ವಾಚಿಸಿದ್ದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ದೇಶದ ವಿವಿಧ ಭಾಷಿಕ ವೈವಿಧ್ಯತೆ ಮತ್ತು ಸಂಸ್ಕೃತಿಯನ್ನು ಕಾವ್ಯದ ಮೂಲಕ ಒಂದೇ ವೇದಿಕೆಯಲ್ಲಿ ಬೆಸೆಯುವ ಪ್ರಯತ್ನ ಸಭಿಕರ ಮನ ಗೆದ್ದಿತು.
ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಅಧಿಕೃತ ಭಾಷೆಯ ಸ್ಥಾನ ಪಡೆದಿರುವ ತುಳು ಭಾಷೆಗೆ ಇದೀಗ ರಾಷ್ಟ್ರ ರಾಜಧಾನಿಯ ಪ್ರಮುಖ ಸಾಂಸ್ಕೃತಿಕ ವೇದಿಕೆಯಲ್ಲಿ ಸಿಕ್ಕ ಈ ಮನ್ನಣೆಯು, ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ದಶಕಗಳ ಬೇಡಿಕೆಗೆ ಮತ್ತಷ್ಟು ಶಕ್ತಿ ತುಂಬಿದೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಇಂತಹ ಉನ್ನತ ಗೋಷ್ಠಿಗಳಲ್ಲಿ ಭಾಷೆಗೆ ಸಿಗುತ್ತಿರುವ ಆದ್ಯತೆಯು, ತುಳು ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆ ಮತ್ತು ಅರ್ಹತೆಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದು, ಸಂವಿಧಾನಾತ್ಮಕ ಅಧಿಕೃತ ಮಾನ್ಯತೆಯ ಹಾದಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ತುಳು ಭಾಷೆಯ ಪ್ರತಿನಿಧಿ ಪ್ರಕಾಶ್ ಶೆಟ್ಟಿ ಉಳೆಪಾಡಿ:

ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದಿಂದ ತುಳು ಭಾಷೆಯನ್ನು ಪ್ರತಿನಿಧಿಸಿದ ತುಳು ಭಾಷಾ ಚಿಂತಕ ಹಾಗೂ ವಾಗ್ಮಿ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ರಾಜ್ಯದ ಹೆಸರಾಂತ ಏಳು ತುಳು ಕವಿಗಳ ಕವನಗಳನ್ನು ಪ್ರಸ್ತುತಪಡಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು, ಕವಿ, ಬರಹಗಾರ, ನಾಟಕಕಾರರು ಆಗಿರುವ ಇವರು ತುಳು ಮಹಾಸಭೆ ದೆಹಲಿಯ ಸಂಚಾಲಕರೂ, ದೆಹಲಿ ತುಳುಸಿರಿಯ ಸಹಕಾರ್ಯದರ್ಶಿಯೂ ಆಗಿದ್ದು ದೆಹಲಿಯ ತುಳು ಕನ್ನಡ ವಲಯದಲ್ಲಿ ಸಕ್ರಿಯರಾಗಿ ಭಾಷೆ ಮತ್ತು ಸಂಸ್ಕೃತಿನ್ನು ರಾಷ್ಟ್ರೀಯ ಮಟ್ಟದಲ್ಲಿ ಪಸರಿಸುತ್ತಿದ್ದಾರೆ.
ಈ ಕಾವ್ಯಗೋಷ್ಠಿಯಲ್ಲಿ ತುಳು ನಾಡಿನ ಪ್ರಸಿದ್ಧ ಕವಿಗಳಿಂದ ಒಟ್ಟು ಏಳು ಕೃತಿಗಳು ಅಂತಿಮ ಸುತ್ತಿನಲ್ಲಿ ಆಯ್ಕೆಗೊಂಡಿದ್ದವು. ಮುದ್ದು ಮೂಡುಬೆಳ್ಳೆ ಅವರ “ಬದ್ಕ್ ಒರಿಪುಗ “, ಅಶೋಕ್ ಎನ್. ಕಡೇಶಿವಾಲಯ ಅವರ“ಎಲ್ಲೆದ ಬಲ್ಲೆಗ್ ಪೊಗ್ಗುನಗ”, ಎಚ್. ಕೆ. ನಯನಾಡು ಅವರ “ಪಸಂದ್ರನೊರಿಪುಗ”, ಪಾಂಗಾಳ ಬಾಬು ಕೊರಗಅವರ “ಪ್ರಕೃತಿದ ಅಸ್ತಿತ್”, ಉಮೇಶ್ ಶಿರಿಯ ಅವರ “ಉದಿಪುದ ಪೊರ್ಲೈಸಿರ”, ಗೀತಾ ಲಕ್ಷ್ಮೀಶ್ ಅವರ “ಪಸಂದ್ರದ ಗೇನ” ಮತ್ತು ವಿಶ್ವನಾಥ ಕುಲಾಲ್ ಮಿತ್ತೂರು ಅವರ “ಪಸಂದ್ರ ಒರಿಯೊಡು” ಕವನಗಳು ಈ ಗೋಷ್ಠಿಯಲ್ಲಿ ಪ್ರಸ್ತಿತಿ ಪಡೆದವು.
ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ಈ ಏಳೂ ಕವಿತೆಗಳನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿ ಗೋಷ್ಠಿಯಲ್ಲಿ ಪ್ರಸ್ತುತ ಪಡಿಸಿದರು. ಕವನಗಳನ್ನು ಮೂಲ ತುಳು ಭಾಷೆಯಲ್ಲಿ ವೇದಿಕೆಯಲ್ಲಿ ಪ್ರಸ್ತುತಪಡಿಸುವಾಗ ಪ್ರಾಜೆಕ್ಟರ್ ಪರದೆಯಲ್ಲಿ ಇಂಗ್ಲೀಷ್ ಅನುವಾದ ಮೂಡಿ ಬರುತ್ತಿದ್ದು ಲೈವ್ ಟ್ರಾನ್ಸ್ಲೇಟ್ ಆಗಿ ನೆರೆದ ವಿವಿಧ ಭಾಷೆಯ ಶ್ರೋತೃಗಳಿಗೆ ಅರ್ಥವಾಗುವಂತೆ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥೆ ವ್ಯವಸ್ಥೆ ಮಾಡಿದ್ದರು.
ಈ ಎಲ್ಲಾ ಕವನಗಳು ತುಳುನಾಡಿನ ಪ್ರಕೃತಿ, ಭಾಷೆ, ಸಂಸ್ಕೃತಿ ವೈಭವ, ರೋಧನೆ ಗಳಿಂದ ಕೂಡಿ ರಾಷ್ಟ್ರೀಯ ಮಟ್ಟದ ಉನ್ನತ ಕೇಳುಗರಿಗೆ ಕರಾವಳಿಯ ಚಿತ್ರಣವನ್ನು ಕಟ್ಟಿ ಕೊಟ್ಟು ಮೆಚ್ಚುಗೆಗೆ ಪಾತ್ರವಾಯಿತು.
ವಿವಿಧ ಭಾಷಾ ತಜ್ಞರಿಂದ ಕಾವ್ಯ ವಾಚನ:
ಗೋಷ್ಠಿಯಲ್ಲಿ ತುಳುವಿನೊಂದಿಗೆ ಇತರ ಭಾಷೆಗಳ ಪ್ರಮುಖ ತಜ್ಞರು ತಮ್ಮ ಮೂಲ ಭಾಷೆಗಳಲ್ಲಿ ಕವನ ವಾಚಿಸಿದರು.ಇಂಗ್ಲಿಷ್ನಲ್ಲಿ ಸುನಿತ್ ಟಂಡನ್, ಸಂಸ್ಕೃತದಲ್ಲಿ ಸುಧಾ ಗೋಪಾಲಕೃಷ್ಣನ್, ಹಿಂದಿಯಲ್ಲಿ ಅಲ್ಕಾ ರಂಜನ್, ಪೂರ್ವಾ ಭಾರದ್ವಾಜ್ ಮತ್ತು ರಜಾ ಹೈದರ್, ಬಂಗಾಳಿಯಲ್ಲಿ ಪೂರ್ಣೇಂದು ಭಟ್ಟಾಚಾರ್ಯ, ಉರ್ದುವಿನಲ್ಲಿ ಡಾ.ಅನೀಸೂರ್ ರೆಹಮಾನ್, ಮಣಿಪುರಿಯಲ್ಲಿ ತಂಗ್ಜಾಮ್ ಹಿಂದೂಸ್ಥಾನಿ ದೇವಿ, ತುಳು ಭಾಷೆಯಲ್ಲಿ ಪ್ರಕಾಶ್ ಶೆಟ್ಟಿ ಉಳೆಪಾಡಿ, ಹಾಗೂ ತೆಲುಗಿನಲ್ಲಿ ಪ್ರೊ. ನಾರಾಯಣಪ್ಪ ಅವರು ಕವನಗಳನ್ನು ವಾಚಿಸಿದರು.
ಮುಖ್ಯ ಅತಿಥಿಗಳ ಮಾತು:
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಐಐಸಿ ಟ್ರಸ್ಟಿ ಅಶ್ವಜಿತ್ ಸಿಂಗ್ ಮಾತನಾಡಿ, “ಪ್ರಕೃತಿ ಮತ್ತು ಮಾನವನ ನಡುವಿನ ಬಾಂಧವ್ಯವನ್ನು ಸಾಹಿತ್ಯ ಹಾಗೂ ಕಾವ್ಯಗಳ ಮೂಲಕ ಮರುಚಿಂತನೆಗೆ ಒಳಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ” ಎಂದು ಹೇಳಿದ ಅವರು, “ಪಂಜಾಬ್ ರಾಜ್ಯದಲ್ಲಿ ಕಳೆದ ತಮ್ಮ ಬಾಲ್ಯವನ್ನು ನೆನಪಿಸಿ ಪ್ರಕೃತಿಯು ಕಾವ್ಯದೊಂದಿಗೆ ನಮ್ಮನ್ನು ಮೂಲಕ್ಕೆ ಮತ್ತಷ್ಟು ಹತ್ತಿರಕ್ಕೆ ಎಳೆದು ತರುತ್ತದೆ” ಎಂದುರು
ಐಐಸಿ ಪ್ರಕಟಣೆಗಳ ಸಂಪಾದಕರಾದ ಕೆ. ಇ. ಪ್ರಿಯಂವದಾ ಅವರು ಪ್ರಸ್ತಾವಿಕವಾಗಿ ಮಾತನಾಡಿ, ವಿವಿಧ ಭಾಷೆಗಳ ಪ್ರಕೃತಿ ಕಾವ್ಯಗಳ ಸೌಂದರ್ಯವನ್ನು ಒಂದೇ ವೇದಿಕೆಯಲ್ಲಿ ಸಭಿಕರಿಗೆ ಉಣಬಡಿಸುವ ಉದ್ದೇಶವನ್ನು ವಿವರಿಸಿದರು.
ನವದೆಹಲಿಯ ಕಮಲಾದೇವಿ ಕಾಂಪ್ಲೆಕ್ಸ್ನ ಸೆಮಿನಾರ್ ಹಾಲ್ನಲ್ಲಿ ನಡೆದ ಈ ಗೋಷ್ಠಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಯೋಜಿಸಿದ್ದ ಹಿರಿಯ ಸಾಹಿತಿ ಹಾಗೂ ಚಿಂತಕರಾದ ಮಲಾಶ್ರೀ ಲಾಲ್ ಮತ್ತು ದೆಹಲಿ ಯೂನಿವರ್ಸಿಟಿಯಅಪೂರ್ವಾನಂದ್ ಅವರು “ಕಾವ್ಯ ಯಾವುದೇ ಭಾಷೆಯಲ್ಲಿದ್ದರೂ ಅದರ ಭಾವ ನಮ್ಮನ್ನು ಪ್ರಕೃತಿಯತ್ತ ಹೊತ್ತೊಯ್ದು ಮೂಲ ಮಣ್ಣಿನ ಪರಿಮಳವನ್ನು ಆಘ್ರಾಣಿಸುವಂತೆ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಸಾಹಿತಿಗಳು, ಚಿಂತಕರು, ಸಾಹಿತ್ಯಾಸಕ್ತರು ಹಾಗೂ ಕಲಾಪ್ರೇಮಿಗಳು ಉಪಸ್ಥಿತರಿದ್ದು ಕಾವ್ಯ ವಾಚನವನ್ನು ಆನಂದಿಸಿದರು.

