ಮಂಗಳೂರು, ಆ. 6: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ–ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಹಲವು ಬಾಗಗಳಲ್ಲಿ ಕಾರ್ಯಚರಣೆ ಕೈಗೊಂಡಿರುತ್ತಾರೆ. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ವಿಭಾಗದ ಸಾರಿಗೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಶಾಲಾ ವಾಹನಗಳ ವಿಶೇಷ ತಪಾಸಣೆ ಮತ್ತು ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಕೈಗೊಂಡ ಕ್ರಮವನ್ನು ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಘಟಕ ಸ್ವಾಗತಿಸಿದೆ.
ರಾಷ್ಟ್ರೀಯ ಹೆದ್ದಾರಿ–73ರ ಬೆಳ್ತಂಗಡಿ ಹಾಗೂ ಉಜಿರೆ ವ್ಯಾಪ್ತಿಯಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಶಾಲಾ ವಾಹನಗಳ ದಾಖಲೆಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ, ವಾಹನಗಳ ತಾಂತ್ರಿಕ ಸ್ಥಿತಿ ಹಾಗೂ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆ ಕಂಡುಬಂದ ವಾಹನಗಳಿಗೆ ದಂಡ (ಚಾಲನ್) ವಿಧಿಸಿರುವುದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮವಾಗಿದೆ.
ಶಾಲಾ ಮಕ್ಕಳ ಸುರಕ್ಷತೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಗಸ್ಟ್ 5ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ (ಆರ್ಟಿಒ) ಮನವಿ ಸಲ್ಲಿಸಿ, ಶಾಲಾ ವಾಹನಗಳಲ್ಲಿ ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸಾಗಿಸುವುದನ್ನು ತಡೆಯುವುದು, ಹಳೆಯ ವಾಹನಗಳ ಕಡ್ಡಾಯ ಫಿಟ್ನೆಸ್ ಪರಿಶೀಲನೆ ನಡೆಸುವುದು, ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹಾಗೂ ಜಿಲ್ಲೆಯಾದ್ಯಂತ ವಿಶೇಷ ತಪಾಸಣೆ ಅಭಿಯಾನ ಕೈಗೊಳ್ಳುವಂತೆ ಒತ್ತಾಯಿಸಿತ್ತು.
ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಸಲ್ಲಿಸಲಾಗಿದ್ದ ಮನವಿಯಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ವಿದ್ಯಾರ್ಥಿಗಳ ಜೀವ ಭದ್ರತೆಗೆ ಯಾವುದೇ ರೀತಿಯ ನಿರ್ಲಕ್ಷ್ಯ ಆಗದಂತೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಸಾರಿಗೆ ಇಲಾಖೆಯನ್ನು ಆಗ್ರಹಿಸಲಾಗಿತ್ತು.
ಇದೀಗ ಬೆಳ್ತಂಗಡಿಯಲ್ಲಿ ನಡೆದ ವಿಶೇಷ ತಪಾಸಣೆ ಅಭಿಯಾನವು ಜೆಡಿಎಸ್ ಪ್ರಸ್ತಾಪಿಸಿದ್ದ ಸುರಕ್ಷತಾ ಕಾಳಜಿಗೆ ಪೂರಕವಾಗಿದ್ದು, ಇಂತಹ ಕಾರ್ಯಾಚರಣೆಗಳು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ನಿರಂತರವಾಗಿ ನಡೆಯಬೇಕು ಎಂದು ಪಕ್ಷ ಆಗ್ರಹಿಸಿದೆ.
ವಿದ್ಯಾರ್ಥಿಗಳ ಜೀವದ ಭದ್ರತೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ವಿಷಯವಲ್ಲ. ಶಾಲಾ ಆಡಳಿತ ಮಂಡಳಿಗಳು, ವಾಹನ ಮಾಲೀಕರು ಮತ್ತು ಚಾಲಕರು ಸರ್ಕಾರದ ಎಲ್ಲಾ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮನವಿ ಮಾಡಿದೆ.

