ಉಡುಪಿ, ಜೂನ್ 15: ಹಲವು ವರ್ಷಗಳಿಂದ ನಿರಂತರವಾಗಿ ರಕ್ತದಾನ ಮಾಡುತ್ತಾ, ರಕ್ತದಾನದ ಮಹತ್ವವನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಸಾಮಾಜಿಕ ಕಾರ್ಯಕರ್ತ, ದೇಹದಾನಿ ಹಾಗೂ ರಕ್ತದಾನಿ ರಮೇಶ ಕರ್ಕೇರ ಉಗ್ಗೆಲ್ಬೆಟ್ಟು ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ನೀಡಲಾಗುವ ವಿಶೇಷ ಗೌರವ ಸನ್ಮಾನಕ್ಕೆ ಭಾಜನರಾಗಿದ್ದಾರೆ.

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯು ಸಮಾಜದಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸಿ, ನಿರಂತರವಾಗಿ ರಕ್ತದಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇತರರಿಗೂ ಪ್ರೇರಣೆಯಾಗಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ರಮೇಶ ಕರ್ಕೇರ ಉಗ್ಗೆಲ್ಬೆಟ್ಟು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ರಮೇಶ ಕರ್ಕೇರ ಅವರು ಹಲವು ವರ್ಷಗಳಿಂದ ಸ್ವಯಂಪ್ರೇರಿತ ರಕ್ತದಾನ ಮಾಡುತ್ತಾ ಬಂದಿರುವುದಲ್ಲದೆ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ವಿಶೇಷವಾಗಿ ಕಳೆದ ಕೆಲವು ವರ್ಷಗಳಿಂದ ತಮ್ಮ ಜನ್ಮದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾ, ರಕ್ತದಾನ ಶಿಬಿರಗಳನ್ನು ಆಯೋಜಿಸಿ, ರಕ್ತದಾನಿಗಳಿಗೆ ಸನ್ಮಾನ ಹಾಗೂ ಅಭಿನಂದನೆ ಸಲ್ಲಿಸುವ ಮೂಲಕ ಯುವಜನರಲ್ಲಿ ರಕ್ತದಾನದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದಲ್ಲದೆ, ದೇಹದಾನದ ಸಂಕಲ್ಪವನ್ನು ಮಾಡಿಕೊಂಡಿರುವ ಅವರು ಸಮಾಜಮುಖಿ ಚಟುವಟಿಕೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಹಕಾರ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ರಮೇಶ ಕರ್ಕೇರ ಅವರು ತಮ್ಮ ಸೇವಾ ಮನೋಭಾವದಿಂದ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ.
ಈ ಗೌರವ ಸನ್ಮಾನದ ಕುರಿತು ಪ್ರತಿಕ್ರಿಯಿಸಿದ ರಮೇಶ ಕರ್ಕೇರ ಉಗ್ಗೆಲ್ಬೆಟ್ಟು ಅವರು, “ನನ್ನನ್ನು ಗುರುತಿಸಿ ಗೌರವಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಶಾಖೆಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸನ್ಮಾನವು ನನ್ನ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಲು ಪ್ರೇರಣೆಯಾಗಿದೆ. ಮುಂದಿನ ದಿನಗಳಲ್ಲಿಯೂ ರಕ್ತದಾನದ ಮಹತ್ವವನ್ನು ಜನರಿಗೆ ತಲುಪಿಸಿ ಹೆಚ್ಚಿನ ಜನರನ್ನು ರಕ್ತದಾನಕ್ಕೆ ಪ್ರೇರೇಪಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತೇನೆ” ಎಂದು ತಿಳಿಸಿದ್ದಾರೆ.
ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ರಮೇಶ ಕರ್ಕೇರ ಅವರಿಗೆ ದೊರೆತಿರುವ ಈ ಗೌರವವು ಅವರ ಸಾಮಾಜಿಕ ಬದ್ಧತೆ ಹಾಗೂ ಮಾನವೀಯ ಸೇವೆಯ ಪ್ರತಿಫಲವಾಗಿದೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

