ಮಂಗಳೂರು: ಬಡವರು, ನಿರ್ಗತಿಕರು, ವಿಕಲಚೇತನರು ಹಾಗೂ ಅನಾರೋಗ್ಯಪೀಡಿತರ ಬದುಕಿಗೆ ಆಸರೆಯಾಗಿ, 600ಕ್ಕೂ ಅಧಿಕ ಸಮಾಜಮುಖಿ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಾನವೀಯ ಸೇವೆಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ರಾಜಕೇಸರಿ ಸೇವಾ ಟ್ರಸ್ಟ್ನ ಸ್ಥಾಪಕ ಶ್ರೀ ದೀಪಕ್ ಜಿ. ಅವರಿಗೆ ‘ತೌಳವ ಸಹಕಾರ ಸನ್ಮಾನ–2026’ರ ಅಂಗವಾಗಿ ‘ತೌಳವ ವಿಶೇಷ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ತುಳುನಾಡ ರಕ್ಷಣಾ ವೇದಿಕೆ (ರಿ.) ಹಾಗೂ ತುಳುನಾಡ ಸೂರ್ಯ ಪತ್ರಿಕೆಯ ವತಿಯಿಂದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ–2026ರ ಪ್ರಯುಕ್ತ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಖಾಸಗಿ ಬಸ್ನಲ್ಲಿ ನಿರ್ವಾಹಕರಾಗಿ ದುಡಿಯುತ್ತಾ, ತಮ್ಮ ಸ್ವಂತ ದುಡಿಮೆಯ ನಡುವೆಯೇ ದಾನಿಗಳು ಹಾಗೂ ಸ್ನೇಹಿತರ ಸಹಕಾರದೊಂದಿಗೆ ರಾಜಕೇಸರಿ ಸೇವಾ ಟ್ರಸ್ಟ್ ಸ್ಥಾಪಿಸಿರುವ ದೀಪಕ್ ಜಿ. ಅವರು ಸಮಾಜದ ಅಸಹಾಯಕ ವರ್ಗಗಳ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
34 ಬಡ ಕುಟುಂಬಗಳಿಗೆ ಉಚಿತ ಮನೆ ನಿರ್ಮಾಣ, ಸ್ವ ಉದ್ಯೋಗಕ್ಕಾಗಿ 21 ಹೊಲಿಗೆ ಯಂತ್ರಗಳ ವಿತರಣೆ, 38 ವಿಕಲಚೇತನರಿಗೆ ವೀಲ್ಚೇರ್ ವಿತರಣೆ, 12 ಜೋಡಿಗಳಿಗೆ ಸಾಮೂಹಿಕ ವಿವಾಹ, ಬಡ ಮಕ್ಕಳ ಚಿಕಿತ್ಸೆಗೆ ನೆರವು ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸೇರಿದಂತೆ 600ಕ್ಕೂ ಅಧಿಕ ಸಮಾಜಮುಖಿ ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದಾರೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ 85 ಮೃತದೇಹಗಳ ಅಂತಿಮ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿರುವ ಅವರು, 14,698 ಮಂದಿ ರಕ್ತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ. ಸ್ವತಃ 37 ಬಾರಿ ರಕ್ತದಾನ ಮಾಡಿರುವುದಲ್ಲದೆ, ಒಂದೇ ದಿನ 543 ಮಂದಿ ನೇತ್ರದಾನಕ್ಕೆ ನೋಂದಾಯಿಸುವಂತೆ ಸಂಘಟಿಸಿರುವುದು ಅವರ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ.
ಶ್ರಮದಾನದ ಮೂಲಕ 16ಕ್ಕೂ ಅಧಿಕ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಿರುವ ಅವರು, ಕ್ರೀಡೆ, ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿಗೂ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಬೆಳ್ತಂಗಡಿ ಸಮೀಪದ ರೆಂಕಡಗುತ್ತುವಿನ ಶ್ರೀ ಬಿ. ಗೋಪಾಲ ಮತ್ತು ಶ್ರೀಮತಿ ಕುಸುಮಾ ದಂಪತಿಯ ಪುತ್ರರಾದ ದೀಪಕ್ ಅವರು ಸರಳ ಕುಟುಂಬದಲ್ಲಿ ಜನಿಸಿ, ಪ್ರಾಥಮಿಕ ಶಿಕ್ಷಣದ ಬಳಿಕ ದುಡಿಮೆಯ ಬದುಕು ಆರಂಭಿಸಿದರು. ಜೀವನದ ಸವಾಲುಗಳ ನಡುವೆಯೂ ಸಮಾಜದ ನೋವಿಗೆ ಸ್ಪಂದಿಸುತ್ತಾ, ಸೇವೆಗೆ ಶ್ರೀಮಂತಿಕೆಗಿಂತಲೂ ಶ್ರೀಮಂತ ಮನಸ್ಸು ಮುಖ್ಯ ಎಂಬುದನ್ನು ತಮ್ಮ ಕಾರ್ಯಗಳ ಮೂಲಕ ಸಾಬೀತುಪಡಿಸಿದ್ದಾರೆ.
ಮೂಡುಬಿದಿರೆ ಜೈನಕಾಶಿಯ ಶ್ರೀ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ದೀಪ ಪ್ರಜ್ವಲಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ಸಂಸ್ಥಾಪಕರು ಹಾಗೂ ಡಿ.ಕೆ. ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರಾದ ಆಲ್ವಿನ್ ಜೋಯೆಲ್ ನೊರೊನ್ಹಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಡೂರು ಶ್ರೀ ಶಿವದುರ್ಗಾಂಬಾ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ, ಅದಾನಿ ಗ್ರೂಪ್ನ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಕಿಶೋರ್ ಆಳ್ವ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಕಿರಣ್ ಬುಡ್ಲೆಗುತ್ತು, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ದಾಸ್ ಪ್ರೋಮೋಷನ್ ಕೇರ್ ಟ್ರಸ್ಟ್ನ ಸ್ಥಾಪಕ ಅನಿಲ್ ದಾಸ್, ಗೋವಿಂದದಾಸ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತಾ ಪಿ. ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಸುರೇಂದ್ರ ಪೂಜಾರಿ ಹಾವಂಜೆ, ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಜಯ ಪೂಜಾರಿ ಲಕ್ಷ್ಮಿನಗರ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು, ಸಹಕಾರಿ ಕ್ಷೇತ್ರದ ಗಣ್ಯರು ಹಾಗೂ ಸಮಾಜದ ಪ್ರಮುಖರು ಭಾಗವಹಿಸಿದ್ದರು.
ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವುದರ ಜೊತೆಗೆ ಸಮಾಜಸೇವೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಸಮಾಜದ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವುದೇ ನಿಜವಾದ ಸೇವೆ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿರುವ ದೀಪಕ್ ಜಿ. ಅವರ ನಿಸ್ವಾರ್ಥ ಸೇವೆ, ಮಾನವೀಯ ಕಳಕಳಿ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಗುರುತಿಸಿ ‘ತೌಳವ ವಿಶೇಷ ಸಾಧಕ ಪ್ರಶಸ್ತಿ–2026’ ನೀಡಿ ಗೌರವಿಸಿರುವುದು ಸಮಾರಂಭದ ವಿಶೇಷ ಆಕರ್ಷಣೆಯಾಗಿತ್ತು.

