ಮಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುವುದರ ಜೊತೆಗೆ ತುಳುನಾಡಿನ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸಂಘಟನಾ ಕ್ಷೇತ್ರದಲ್ಲಿ ದಶಕಗಳ ಕಾಲ ಗಣನೀಯ ಸೇವೆ ಸಲ್ಲಿಸಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಮುಲ್ಕಿ ಕರುಣಾಕರ ಶೆಟ್ಟಿ ಅವರಿಗೆ ತುಳುನಾಡ ರಕ್ಷಣಾ ವೇದಿಕೆ (ರಿ.) ಹಾಗೂ ತುಳುನಾಡ ಸೂರ್ಯ ಪತ್ರಿಕೆ, ಮಂಗಳೂರು ವತಿಯಿಂದ ನೀಡಲಾಗುವ ‘ತೌಳವ ವಿಶೇಷ ಸಾಧಕ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು.
ದಿವಂಗತ ಕುಂಡು ಶೆಟ್ಟಿ ಮತ್ತು ದಿವಂಗತ ಸರಸ್ವತಿ ಶೆಟ್ಟಿಯವರ ಪುತ್ರರಾಗಿ 1955ರ ಜೂನ್ 9ರಂದು ಮುಲ್ಕಿ ಕಕ್ವದಲ್ಲಿ ಜನಿಸಿದ ಕರುಣಾಕರ ಶೆಟ್ಟಿಯವರು ತಮ್ಮ ವೃತ್ತಿಜೀವನವನ್ನು ವಿಜಯ ಬ್ಯಾಂಕಿನಲ್ಲಿ ಆರಂಭಿಸಿ, ಸತತ 38 ವರ್ಷಗಳ ಕಾಲ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸಿದ್ದಾರೆ. ಮುಂಬೈ, ಮೀರಜ್, ಮೈಸೂರು ಹಾಗೂ ಮಂಗಳೂರಿನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ 2015ರಲ್ಲಿ ನಿವೃತ್ತರಾದರು. ವೃತ್ತಿಜೀವನದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಸಂಘಟನಾ ಚಟುವಟಿಕೆಗಳಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಅವರ ಬಹುಮುಖ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ನೆಲೆಸಿದ್ದ ಅವಧಿಯಲ್ಲಿ ಅಲ್ಲಿನ ವಿವಿಧ ತುಳುವರ, ಬಂಟರ ಹಾಗೂ ಕನ್ನಡಿಗರ ಸಂಘಟನೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮೈಸೂರು ದಕ್ಷಿಣ ಕನ್ನಡ ಜಿಲ್ಲಾ ಸಂಘ, ಬಂಟರ ಸಂಘ ಸೇರಿದಂತೆ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ, ಸಮುದಾಯದ ಜನರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ನಿರಂತರ ಸೇವೆ
ಅಖಿಲ ಭಾರತ ತುಳು ಒಕ್ಕೂಟದಲ್ಲಿ ಕೋಶಾಧಿಕಾರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಮಾಧ್ಯಮ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಳು ಭಾಷೆಯ ಬೆಳವಣಿಗೆ, ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ವಿಶ್ವದಾದ್ಯಂತ ಹರಡಿರುವ ತುಳುವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
2014ರಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಯಶಸ್ಸಿಗೆ ಸಂಘಟಕರಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. 2018ರಲ್ಲಿ ದುಬೈಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿಯೂ ಭಾಗವಹಿಸಿ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಚಾರಕ್ಕೆ ಶ್ರಮಿಸಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ದುಬೈಯಲ್ಲಿ ಗೌರವ ಸನ್ಮಾನಕ್ಕೂ ಪಾತ್ರರಾಗಿದ್ದಾರೆ.
ಮಾಧ್ಯಮ ಮತ್ತು ಸಾಮಾಜಿಕ ಸಂಘಟನಾ ಕ್ಷೇತ್ರದಲ್ಲಿಯೂ ವಿಶಿಷ್ಟ ಕೊಡುಗೆ
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಮಾಧ್ಯಮ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಕಾವೂರು ಬಂಟರ ಸಂಘದ ಮಾಧ್ಯಮ ವಕ್ತಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ‘ಬಂಟ ಬೆಳಕು’ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.38 ವರ್ಷಗಳ ಬ್ಯಾಂಕಿಂಗ್ ಸೇವೆ, ತುಳು ಭಾಷೆ-ಸಂಸ್ಕೃತಿಯ ಉಳಿವಿಗಾಗಿ ದಶಕಗಳ ಸಂಘಟನಾ ಶ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ಪತ್ರಿಕೆಯ ಗೌರವ
ಇದಲ್ಲದೆ, ‘ನಮ್ಮೂರ ಆಟ–ಕೂಟ ಟ್ರಸ್ಟ್’ನ ಸ್ಥಾಪಕ ಅಧ್ಯಕ್ಷರಾಗಿ ಗ್ರಾಮೀಣ ಕ್ರೀಡೆ, ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಒಗ್ಗಟ್ಟಿನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ತುಳುನಾಡಿನ ಹೆಮ್ಮೆಯ ವ್ಯಕ್ತಿತ್ವವಾದ ದಿವಂಗತ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರಿನ ಸ್ಮರಣೆ ಮತ್ತು ಗೌರವಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿಯೂ ಅವರ ಪ್ರಯತ್ನ ಗಮನಾರ್ಹವಾಗಿದೆ.
ಹಲವು ಪ್ರತಿಷ್ಠಿತ ಪ್ರಶಸ್ತಿ-ಗೌರವಗಳಿಗೆ ಭಾಜನರು
ಕರುಣಾಕರ ಶೆಟ್ಟಿಯವರ ಸಂಘಟನಾ ಚಾತುರ್ಯ, ಸಮಾಜಮುಖಿ ಸೇವೆ ಹಾಗೂ ತುಳುನಾಡಿನ ಭಾಷೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ.
ವೀರರತ್ನ ಮಂಡಳಿಯ ವತಿಯಿಂದ ಅತ್ಯುತ್ತಮ ಸಂಘಟನಾ ಪ್ರಶಸ್ತಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಶ್ರೀ ವೀರಪ್ಪ ಮೊಯ್ಲಿಯವರಿಂದ ಅತ್ಯುತ್ತಮ ಸಂಘಟನಾ ಕಾರ್ಯದರ್ಶಿ ಪ್ರಶಸ್ತಿ, ಮೀರಜ್ ತುಳುನಾಡ ಸಂಘದ ಪ್ರತಿಷ್ಠಿತ ‘ತುಳುವ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.
ಇತ್ತೀಚೆಗೆ 2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಅವರ ಸುದೀರ್ಘ ಸಮಾಜಮುಖಿ ಸೇವೆ ಮತ್ತು ಸಂಘಟನಾ ಸಾಧನೆಗೆ ಸಂದಿರುವ ಮಹತ್ವದ ಮನ್ನಣೆಯಾಗಿದೆ.
ಬ್ಯಾಂಕಿಂಗ್ ಕ್ಷೇತ್ರದ ವೃತ್ತಿಪರ ಅನುಭವವನ್ನು ಸಾಮಾಜಿಕ ಸಂಘಟನಾ ಚಟುವಟಿಕೆಗಳೊಂದಿಗೆ ಸಮನ್ವಯಗೊಳಿಸಿ, ತುಳುನಾಡಿನ ಜನರ ಭಾಷೆ, ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರುಣಾಕರ ಶೆಟ್ಟಿಯವರ ಸೇವೆ ನಿಜಕ್ಕೂ ಅಭಿನಂದನಾರ್ಹವಾಗಿದೆ.
ಸಂಘಟನೆಯೇ ಶಕ್ತಿ, ಸೇವೆಯೇ ಬದುಕಿನ ಸಾರ್ಥಕತೆ ಎಂಬ ಆಶಯದೊಂದಿಗೆ ಹಲವು ದಶಕಗಳಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮುಲ್ಕಿ ಕರುಣಾಕರ ಶೆಟ್ಟಿಯವರ ಸಾಧನೆ ಯುವ ಪೀಳಿಗೆಗೆ ಮಾದರಿ ಮತ್ತು ಪ್ರೇರಣೆಯಾಗಿದೆ.
ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ
ಮೂಡುಬಿದಿರೆ ಜೈನಕಾಶಿಯ ಶ್ರೀ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು.
ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ಸಂಸ್ಥಾಪಕರು ಹಾಗೂ ಡಿ.ಕೆ. ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರಾದ ಆಲ್ವಿನ್ ಜೋಯೆಲ್ ನೊರೊನ್ಹಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಡೂರು ಶ್ರೀ ಶಿವದುರ್ಗಾಂಬಾ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ, ಅದಾನಿ ಗ್ರೂಪ್ನ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಕಿಶೋರ್ ಆಳ್ವ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಕಿರಣ್ ಬುಡ್ಲೆಗುತ್ತು, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ದಾಸ್ ಪ್ರೋಮೋಷನ್ ಕೇರ್ ಟ್ರಸ್ಟ್ನ ಸ್ಥಾಪಕ ಅನಿಲ್ ದಾಸ್, ಗೋವಿಂದದಾಸ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತಾ ಪಿ., ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಸುರೇಂದ್ರ ಪೂಜಾರಿ ಹಾವಂಜೆ, ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಜಯ ಪೂಜಾರಿ ಲಕ್ಷ್ಮಿನಗರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

