ಮಂಗಳೂರು, ಜುಲೈ 19: ಪರಮಜ್ಯೋತಿ ಭಜನಾ ಮಂಡಳಿ ವತಿಯಿಂದ ಬಜಾಲದಲ್ಲಿ ತುಳುನಾಡಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ “ಆಟಿ ದೊಂಜಿ ದಿನ” ಕಾರ್ಯಕ್ರಮ ಅತ್ಯಂತ ಸಂಭ್ರಮ, ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಮಜ್ಯೋತಿ ಭಜನಾ ಮಂಡಳಿಯ ಅಧ್ಯಕ್ಷರಾದ ನ್ಯಾಯವಾದಿ ದಿನಕರ್ ಶೆಟ್ಟಿ ವಹಿಸಿದ್ದರು. ಅವರು ಅತಿಥಿಗಳು ಹಾಗೂ ನೆರೆದಿದ್ದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಆಟಿ ತಿಂಗಳ ಆಚರಣೆಗಳು ನಮ್ಮ ಸಂಸ್ಕೃತಿಯ ಜೀವಾಳವಾಗಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯವನ್ನು ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಪ್ರಾರ್ಥನೆ ಹಾಗೂ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಳಿಕ ಬಜಾಲದ ಹೆಮ್ಮೆಯ ಮಹಿಳೆ, ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಡಾ. ಆಶಾಲತಾ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರು ಆಟಿ ತಿಂಗಳ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಮಹತ್ವವನ್ನು ವಿವರವಾಗಿ ತಿಳಿಸಿದರು.

ಅವರು ಮಾತನಾಡಿ, ಆಟಿ ತಿಂಗಳು ಕೇವಲ ಪಂಚಾಂಗದ ಒಂದು ಮಾಸವಲ್ಲ; ಅದು ತುಳುನಾಡಿನ ಜನಜೀವನ, ಕೃಷಿ ಸಂಸ್ಕೃತಿ, ಪ್ರಕೃತಿ ಆರಾಧನೆ ಹಾಗೂ ಆರೋಗ್ಯಕರ ಜೀವನಶೈಲಿಯ ಪ್ರತೀಕವಾಗಿದೆ. ಈ ಅವಧಿಯಲ್ಲಿ ಪೂರ್ವಜರು ಅನುಸರಿಸುತ್ತಿದ್ದ ಆಹಾರ ಪದ್ಧತಿ, ಔಷಧೀಯ ಸಸ್ಯಗಳ ಬಳಕೆ, ಆಟಿ ಕಷಾಯ, ಆಟಿ ತಿಂಡಿಗಳ ಸೇವನೆ ಸೇರಿದಂತೆ ಅನೇಕ ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಕಾರಣಗಳಿದ್ದು, ಇವು ಮಾನವನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಮ್ಮ ಪರಂಪರೆ ನಿಧಾನವಾಗಿ ಮರೆಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವಜನರಲ್ಲಿ ತುಳುನಾಡಿನ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ತುಳುವರ ಕರ್ತವ್ಯವಾಗಿದೆ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದೂ ಯುವ ಸೇನೆಯ ಗೌರವಾಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ, ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ನ ಮುಖಂಡ ರತನ್ ಶೆಟ್ಟಿ, ಜಯಂತಿ ವಿಶ್ವನಾಥ್, ಪರಂಜ್ಯೋತಿ ಮಂದಿರದ ಪದಾಧಿಕಾರಿಗಳಾದ ಹೇಮಾ ಪ್ರಕಾಶ್ ಹೆಗ್ಡೆ,ವನಿತಾ ಅರುಣ್, ಸುರೇಶ್ ಭಟ್, ಭಾರ್ಗವ ಶಾಖೆ ಅಧ್ಯಕ್ಷರಾದ ವಿನಯ್ ಕುಮಾರ್ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಕೇಶ್ ಉಪಸ್ಥಿತರಿದ್ದರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಆಟಿ ತಿಂಗಳ ಆಚರಣೆಗಳ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಜಾಲ ಪರಿಸರದ ಹೆಮ್ಮೆಯ ಮಹಿಳೆ, ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಡಾಕ್ಟರೇಟ್ ಪದವಿ ಪಡೆದ ಡಾ. ಆಶಾಲತಾ ಅವರನ್ನು ಪರಮಜ್ಯೋತಿ ಭಜನಾ ಮಂಡಳಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದ್ದು, ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು, ಯುವಕರು ಹಾಗೂ ಬಜಾಲ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಆಟಿ ತಿಂಗಳ ವಿಶೇಷ ಸಾಂಪ್ರದಾಯಿಕ ತಿನಿಸುಗಳನ್ನು ಒಳಗೊಂಡ ಸವಿಯಾದ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಆತ್ಮೀಯವಾಗಿ ಪಾಲ್ಗೊಂಡು ತುಳುನಾಡಿನ ಸಾಂಪ್ರದಾಯಿಕ ಆಹಾರದ ಸೊಗಡನ್ನು ಸವಿದರು.
ಪರಂಪರೆ, ಸಂಸ್ಕೃತಿ ಮತ್ತು ಸಾಮಾಜಿಕ ಐಕ್ಯತೆಯನ್ನು ಬಲಪಡಿಸಿದ ಈ ಆಟಿ ದೊಂಜಿ ದಿನ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

