ಮೂಡುಬಿದಿರೆ: ತಾಲೂಕಿನ ನಿಡ್ಡೋಡಿ ಗ್ರಾಮದ ಬಂಗೇರಪದವು ಎಂಬಲ್ಲಿ ಕಲ್ಲಿನ ಕ್ವಾರಿಯಲ್ಲಿ ಕಲ್ಲು ಸಾಗಾಟದಲ್ಲಿ ತೊಡಗಿದ್ದ ಲಾರಿಯೊಂದು ಏಕಾಏಕಿ ನಿಯಂತ್ರಣ ತಪ್ಪಿ ನೀರು ತುಂಬಿದ್ದ ಕ್ವಾರಿ ಕೋರೆಗೆ ಉರುಳಿ ಬಿದ್ದ ಘಟನೆ ನಡೆದಿದೆ.
ಕ್ವಾರಿಯಲ್ಲಿ ಕಲ್ಲು ಸಾಗಾಟ ಮಾಡುತ್ತಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ್ದ ಕೋರೆಗೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಲಾರಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದರೂ, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಕ್ವಾರಿ ಕೋರೆಗೆ ಬಿದ್ದ ಲಾರಿಯನ್ನು ಮೇಲಕ್ಕೆತ್ತಲು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಲಾರಿ ಯಾವ ಕಾರಣಕ್ಕೆ ನಿಯಂತ್ರಣ ತಪ್ಪಿತು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

