ಮಂಗಳೂರು, ಜುಲೈ 18: ದೇಶದ ಹೆಮ್ಮೆಯ ಮಾಜಿ ಪ್ರಧಾನಮಂತ್ರಿಗಳೂ, ಜನತಾದಳ (ಜಾತ್ಯತೀತ)ದ ರಾಷ್ಟ್ರೀಯ ಹಿರಿಯ ನಾಯಕರೂ ಆದ ಶ್ರೀ ಎಚ್.ಡಿ. ದೇವೇಗೌಡರ ಧರ್ಮಪತ್ನಿ, ಮಾತೃಸ್ವರೂಪಿ ಶ್ರೀಮತಿ ಚನ್ನಮ್ಮನವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತ ಮತ್ತು ಅಪಾರ ದುಃಖವಾಗಿದೆ ಎಂದು ಜನತಾದಳ (ಜಾತ್ಯತೀತ) ರಾಜ್ಯ ಉಪಾಧ್ಯಕ್ಷ ಎಂ. ಬಿ. ಸದಾಶಿವ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ನಾಲ್ಕು ದಶಕಗಳಿಂದ ಶ್ರೀಮತಿ ಚನ್ನಮ್ಮನವರ ಅಕ್ಕರೆ, ಆತ್ಮೀಯತೆ, ಮಮತೆ ಮತ್ತು ಆಶೀರ್ವಾದದ ನೆರಳಿನಲ್ಲಿ ಬದುಕುವ ಭಾಗ್ಯ ನನಗೂ ನನ್ನ ಕುಟುಂಬಕ್ಕೂ ದೊರೆತಿತ್ತು. ಅವರ ಅಗಲಿಕೆ ನಮ್ಮ ಕುಟುಂಬದ ಹಿರಿಯ ತಾಯಿಯನ್ನು ಕಳೆದುಕೊಂಡಷ್ಟೇ ನೋವನ್ನು ಉಂಟುಮಾಡಿದ್ದು, ಈ ನಷ್ಟವನ್ನು ಯಾವತ್ತೂ ತುಂಬಲು ಸಾಧ್ಯವಿಲ್ಲ ಎಂದು ಭಾವುಕರಾಗಿ ತಿಳಿಸಿದ್ದಾರೆ.
ಶ್ರೀ ಎಚ್.ಡಿ. ದೇವೇಗೌಡರು ದೇಶದ ಅತ್ಯುನ್ನತ ರಾಜಕೀಯ ಸ್ಥಾನವನ್ನು ಅಲಂಕರಿಸುವ ಹಾದಿಯಲ್ಲಿ ಸಾಗುವಾಗ, ಪ್ರತಿಯೊಂದು ಹೆಜ್ಜೆಯಲ್ಲೂ ಧೈರ್ಯ, ತ್ಯಾಗ, ಸಹನೆ ಮತ್ತು ನಿಸ್ವಾರ್ಥ ಸೇವಾ ಮನೋಭಾವದಿಂದ ಬೆನ್ನೆಲುಬಾಗಿ ನಿಂತ ಮಹಾನ್ ವ್ಯಕ್ತಿತ್ವ ಶ್ರೀಮತಿ ಚನ್ನಮ್ಮನವರದು. ಅವರ ಸರಳ ಜೀವನ, ಸಂಸ್ಕಾರ, ಕುಟುಂಬದ ಮೇಲಿನ ಅಪಾರ ಪ್ರೀತಿ ಮತ್ತು ಸೇವಾ ಮನೋಭಾವವೇ ದೇವೇಗೌಡರ ಯಶಸ್ಸಿನ ಹಿಂದಿನ ನಿಜವಾದ ಶಕ್ತಿಯಾಗಿತ್ತು ಎಂದು ಸದಾಶಿವ ಅವರು ಹೇಳಿದ್ದಾರೆ.
ಅವರ ಮನೆಗೆ ಭೇಟಿ ನೀಡಿದ ಪ್ರತಿಯೊಂದು ಸಂದರ್ಭದಲ್ಲೂ ತಾಯಿಯ ಮಮತೆಯಿಂದ ಬರಮಾಡಿಕೊಂಡು, ಯಾರೇ ಬಂದರೂ ಪ್ರೀತಿಯಿಂದ ಉಪಚಾರ ಮಾಡಿ, “ಊಟ ಮಾಡದೇ ಹೋಗಬೇಡ” ಎಂದು ಒತ್ತಾಯಿಸುತ್ತಿದ್ದ ಅವರ ಆತ್ಮೀಯತೆ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಆತಿಥ್ಯದಲ್ಲಿ ಔಪಚಾರಿಕತೆ ಇರಲಿಲ್ಲ; ಅದು ನಿಜವಾದ ತಾಯಿಯ ಪ್ರೀತಿ, ಕಾಳಜಿ ಮತ್ತು ಮಾನವೀಯತೆಯ ಜೀವಂತ ರೂಪವಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.
ಶ್ರೀಮತಿ ಚನ್ನಮ್ಮನವರು ಅಪಾರ ದೈವಭಕ್ತರಾಗಿದ್ದರು. ಇತ್ತೀಚೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ತಮ್ಮ ಅಪೇಕ್ಷೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಅವರೊಂದಿಗೆ ನಡೆದ ಆ ಆತ್ಮೀಯ ಮಾತುಕತೆ ಮತ್ತು ಅವರು ಹೇಳಿದ ಮಾತುಗಳು ನನ್ನ ಬದುಕಿನ ಅಮೂಲ್ಯ ನೆನಪುಗಳಾಗಿ ಸದಾ ಉಳಿಯಲಿವೆ ಎಂದು ತಿಳಿಸಿದ್ದಾರೆ.
ಅವರ ನೆನಪಿನ ಶಕ್ತಿ ಅಸಾಧಾರಣವಾಗಿತ್ತು. ದೇವಸ್ಥಾನದಲ್ಲಿ ಸಂಕಲ್ಪ ಮಾಡುವ ವೇಳೆ ಯಾವುದೇ ಚೀಟಿ ಅಥವಾ ಟಿಪ್ಪಣಿಯ ಸಹಾಯವಿಲ್ಲದೆ, ಪೂಜ್ಯ ದೇವೇಗೌಡರಿಂದ ಆರಂಭಿಸಿ ತಮ್ಮ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳ ಹೆಸರು ಮತ್ತು ನಕ್ಷತ್ರಗಳನ್ನು ನಿರರ್ಗಳವಾಗಿ ಹೇಳುತ್ತಿದ್ದ ದೃಶ್ಯ, ಅವರ ಕುಟುಂಬದ ಮೇಲಿದ್ದ ಅಪಾರ ಪ್ರೀತಿ, ಕಾಳಜಿ ಮತ್ತು ಜವಾಬ್ದಾರಿತನಕ್ಕೆ ಸಾಕ್ಷಿಯಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಮಾತೃಸ್ವರೂಪಿ ಶ್ರೀಮತಿ ಚನ್ನಮ್ಮನವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಮತ್ತು ಧೈರ್ಯವನ್ನು ಪೂಜ್ಯ ಶ್ರೀ ಎಚ್.ಡಿ. ದೇವೇಗೌಡರು ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರಿಗೆ ಭಗವಂತನು ಕರುಣಿಸಲಿ. ಕರ್ನಾಟಕದ ನೆಲ, ಜಲ, ಭಾಷೆ, ರೈತರು ಮತ್ತು ನಾಡಿನ ಹಿತಕ್ಕಾಗಿ ದೇವೇಗೌಡರು ಇನ್ನೂ ದೀರ್ಘಕಾಲ ಆರೋಗ್ಯದಿಂದ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಮಾತೃಸ್ವರೂಪಿ ಶ್ರೀಮತಿ ಚನ್ನಮ್ಮನವರ ಪವಿತ್ರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ನೀಡಲಿ ಎಂದು ನನ್ನ ಹಾಗೂ ನನ್ನ ಕುಟುಂಬದ ಪರವಾಗಿ ಭಗವಂತನಲ್ಲಿ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
– ಎಂ. ಬಿ. ಸದಾಶಿವ
ರಾಜ್ಯ ಉಪಾಧ್ಯಕ್ಷರು
ಜನತಾದಳ (ಜಾತ್ಯತೀತ)

