ಮಂಗಳೂರು, ಜೂನ್ 28: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವದ ಅಂಗವಾಗಿ ಮಲ್ಲಾರು ಮಜೂರಿನ ಬದ್ರಿಯಾ ಜುಮುಅ ಮಸ್ಜಿದ್ನಲ್ಲಿ ಭಾನುವಾರ ಧ್ವಜಾರೋಹಣ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮುಅ ಮಸ್ಜಿದ್ ಅಧ್ಯಕ್ಷ ಡಾ. ಎಂ. ಫಾರೂಕ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. “1926ರ ಜೂನ್ 26ರಂದು ಸ್ಥಾಪನೆಯಾದ ಸಮಸ್ತ ಉಲಮಾ ಸಂಘಟನೆ ಇಂದು ಶತಮಾನೋತ್ಸವವನ್ನು ಆಚರಿಸುತ್ತಿರುವುದು ಮುಸ್ಲಿಂ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕಳೆದ ನೂರು ವರ್ಷಗಳಿಂದ ಧಾರ್ಮಿಕ ಮಾರ್ಗದರ್ಶನ, ಶೈಕ್ಷಣಿಕ ಪ್ರಗತಿ, ಸಾಮಾಜಿಕ ಸೇವೆ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಮಸ್ತ ನೀಡಿರುವ ಕೊಡುಗೆ ಅಪಾರವಾಗಿದೆ. ಇಂತಹ ಮಹತ್ವದ ಸಂಘಟನೆಯ ಶತಮಾನೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯವಾಗಿದೆ” ಎಂದು ಅವರು ಹೇಳಿದರು.
ಸ್ಥಳೀಯ ಖತೀಬ್ ಅಬ್ದುರ್ರಶೀದ್ ಸಖಾಫಿ ದುವಾ ಪ್ರಾರ್ಥನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಮಸ್ತ ಮದರಸ ತಪಾಸಣಾಧಿಕಾರಿ ಹಸನ್ ಸಖಾಫಿ, ಸುನ್ನೀ ಅಧ್ಯಾಪಕರ ಒಕ್ಕೂಟದ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹಮಾನ್ ಸಅದಿ, ಆಡಳಿತ ಸಮಿತಿಯ ಉಪಾಧ್ಯಕ್ಷ ಹಸನಬ್ಬ ಮಜೂರು, ಕಾರ್ಯದರ್ಶಿ ಅಶ್ರಫ್ ಮೂಸ, ಕೋಶಾಧಿಕಾರಿ ಇಬ್ರಾಹಿಂ ಪಿ.ಎಂ., ಕೊಂಬುಗುಡ್ಡೆ ಇಮಾಂ ತಾಜುದ್ದೀನ್ ಸಖಾಫಿ, ಅಶ್ರಫ್ ಮದನಿ, ಸದಸ್ಯರಾದ ಹಸನಬ್ಬ ಗುಡ್ಡಗೇರಿ, ಅಬ್ದುಲ್ಲ ಚಂದ್ರನಗರ, ಹಸನ್ ಪಕೀರ್ಣಕಟ್ಟೆ, ಮಾಜಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ಹಮೀದ್, ಹಾಜಬ್ಬ, ಮಾಜಿ ಕಾರ್ಯದರ್ಶಿಗಳಾದ ಅಬ್ದುಲ್ ಹಮೀದ್, ಫೈಝಲ್ ಮಜೂರು, ಮುಹಮ್ಮದ್ ಕರಂದಾಡಿ, ಇಮ್ರಾನ್ ಹಾಗೂ ಅಬ್ದುಲ್ ಹಮೀದ್ ಮುಕ್ರಿ ಸೇರಿದಂತೆ ಹಲವಾರು ಗಣ್ಯರು ಮತ್ತು ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.
ಸಮಸ್ತ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಲಾದ ಈ ಧ್ವಜಾರೋಹಣ ಕಾರ್ಯಕ್ರಮವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯ ಸಂದೇಶವನ್ನು ಸಾರುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.

