ಮಂಗಳೂರು, ಜು. 29: ಚಿನ್ನಾಭರಣ ದೋಚುವ ಉದ್ದೇಶದಿಂದ 2021ರ ಜನವರಿ 25ರಂದು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೇಲಿ ನಿವಾಸಿ 80 ವರ್ಷದ ಹಿರಿಯ ಮಹಿಳೆ ಬೆನೆಡಿಕ್ಟ್ ಕಾರ್ಲೋ ಅವರಿಗೆ ವಿಷಪ್ರಾಶನ ಮಾಡಿ, ಬಳಿಕ ಉಸಿರುಗಟ್ಟಿಸಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾದವರು ಅಮ್ಮಾಡಿ ಹೀರಾ ನಿವಾಸಿ ವಿಲ್ಮಾ ಪ್ರಶಿತಾ ಬಾರೆಟ್ಟೊ (30), ನರಿಕೊಂಬು ಅಂತರಹಾಸ್ ನಿವಾಸಿ ಸತೀಶ್ (33) ಹಾಗೂ ನರಿಕೊಂಬು ಪದಕೆಟ್ಟೆ ಹೊಯಿಗೆಬೈಲು ನಿವಾಸಿ ಚರಣ್ ಕುಮಾರ್ (34).
ಪ್ರಕರಣದ ಹಿನ್ನೆಲೆ:
ಬೆನೆಡಿಕ್ಟ್ ಕಾರ್ಲೋ ಅವರು ತಮ್ಮ ಪತಿ ಇನಾಸ್ ಕಾರ್ಲೋ ಅವರೊಂದಿಗೆ ಅಮ್ಮುಂಜೆಯ ಪಾಂಡೇಲಿಯಲ್ಲಿ ವಾಸವಾಗಿದ್ದರು. ಪಾರ್ಶ್ವವಾಯು ಪೀಡಿತರಾಗಿದ್ದ ಇನಾಸ್ ಕಾರ್ಲೋ ಅವರ ಆರೈಕೆಗೆ ವಿಲ್ಮಾ ಪ್ರಶಿತಾ ಬಾರೆಟ್ಟೊ ಸುಮಾರು ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು.
ಈ ವೇಳೆ ಬೆನೆಡಿಕ್ಟ್ ಕಾರ್ಲೋ ಅವರ ಬಳಿ ಹೆಚ್ಚಿನ ಪ್ರಮಾಣದ ಚಿನ್ನಾಭರಣಗಳಿರುವುದನ್ನು ಗಮನಿಸಿದ ವಿಲ್ಮಾ, ಅವುಗಳನ್ನು ದೋಚುವ ಉದ್ದೇಶದಿಂದ ಸಂಚು ರೂಪಿಸಿದ್ದಳು. ಈ ಮಾಹಿತಿಯನ್ನು ತನ್ನ ಪರಿಚಯದ ಸತೀಶ್ಗೆ ತಿಳಿಸಿದ್ದು, ಆತ ಆಹಾರದೊಂದಿಗೆ ವಿಷ ಬೆರೆಸಿ ನೀಡುವಂತೆ ಸಲಹೆ ನೀಡಿದ್ದಾನೆ.
ಅದರಂತೆ 2021ರ ಜನವರಿ 25ರಂದು ರಾತ್ರಿ ಬೆನೆಡಿಕ್ಟ್ ಅವರಿಗೆ ವಿಷಪ್ರಾಶನ ಮಾಡಲಾಗಿತ್ತು. ವಿಷ ಸೇವನೆಯಿಂದ ಅವರು ಅರೆಜೀವ ಸ್ಥಿತಿಗೆ ತಲುಪಿದ ಬಳಿಕ ವಿಲ್ಮಾ ಮತ್ತೆ ಸತೀಶ್ಗೆ ಕರೆ ಮಾಡಿದ್ದಳು. ನಂತರ ಬೆನೆಡಿಕ್ಟ್ ಅವರನ್ನು ಉಸಿರುಗಟ್ಟಿಸಿ ಕೊಲ್ಲುವ ಸಂಚು ರೂಪಿಸಲಾಗಿತ್ತು.
ಸತೀಶ್ ಸೂಚನೆಯಂತೆ ಚರಣ್ ಕುಮಾರ್ ಸ್ಥಳಕ್ಕೆ ಆಗಮಿಸಿ, ವಿಲ್ಮಾ ಜೊತೆಗೂಡಿ ತಲೆದಿಂಬು ಹಾಗೂ ಬೆಡ್ಶೀಟ್ ಬಳಸಿ ಬೆನೆಡಿಕ್ಟ್ ಕಾರ್ಲೋ ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದರು.
₹2.75 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದರು
ಕೊಲೆ ಬಳಿಕ ಆರೋಪಿಗಳು ಮೃತರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಕಿವಿಯೋಲೆ, ಕೈಬಳೆ, ಉಂಗುರಗಳು, ಚೈನ್ ಸೇರಿದಂತೆ ಒಟ್ಟು 61.070 ಗ್ರಾಂ ತೂಕದ ಸುಮಾರು ₹2.75 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದರು.
ಆರಂಭದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ನಡೆಸಿದ ಸವಿಸ್ತಾರ ತನಿಖೆಯಲ್ಲಿ ಇದು ಪೂರ್ವಯೋಜಿತ ಕೊಲೆ ಎಂಬುದು ಬಹಿರಂಗಗೊಂಡಿದ್ದು, ಕೊಲೆ ಹಾಗೂ ದರೋಡೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸಾಕ್ಷ್ಯಾಧಾರಗಳು ಮತ್ತು ವಿಚಾರಣೆಯ ಆಧಾರದ ಮೇಲೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

