ಮಂಗಳೂರು :ಪ್ರಾರ್ಥನಾ ಕ್ರಿಯೇಷನ್ಸ್ ಮಂಗಳೂರು ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಹುಭಾಷಾ ಚಿತ್ರ “ಕೊರಗ್ಲಾ ತನಿಯಾ” ಹಾಗೂ ತುಳು ಚಲನಚಿತ್ರ “ಕನ” ಚಿತ್ರದ ಮುಹೂರ್ತ ಸಮಾರಂಭವು ಏಪ್ರಿಲ್ 23ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಆರ್. ಧನರಾಜ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
“ಕೊರಗ್ಲಾ ತನಿಯಾ” ಸಿನಿಮಾಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರಂಭ ಫಲಕ ತೋರಿಸಲಿದ್ದು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಕ್ಯಾಮೆರಾ ಚಾಲನೆಗೈಯಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಇನ್ನೊಂದೆಡೆ “ಕನ” ತುಳು ಸಿನಿಮಾಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಆರಂಭ ಫಲಕ ತೋರಿಸಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಬಹುಭಾಷಾ ನಟ ಸುಮನ್ ತಲ್ವಾರ್ ದೀಪ ಬೆಳಗಿಸಲಿದ್ದಾರೆ. ಶಾಸಕ ಸಿ.ಬಿ. ಸುರೇಶ್ ಬಾಬು ಕ್ಯಾಮೆರಾ ಚಾಲನೆಗೈಯಲಿದ್ದಾರೆ.
ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
“ಕೊರಗ್ಲಾ ತನಿಯಾ” ಸಿನಿಮಾಗೆ ಆರ್. ಧನರಾಜ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಲಿದ್ದಾರೆ. “ಕನ” ತುಳು ಸಿನಿಮಾಗೆ ವಿಶ್ವನಾಥ್ ಕೋಡಿಕಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅರ್ಚನ ಶೆಟ್ಟಿ ಈ ಎರಡೂ ಸಿನಿಮಾಗಳ ಸಹ-ನಿರ್ಮಾಪಕರಾಗಿದ್ದಾರೆ.

