ಕಾರ್ಕಳ, ಆ. 12: ಕಾರ್ಕಳ ತಾಲೂಕಿನ ಕೌಡೂರು ರಂಗನಪಳ್ಳಿಯ ಶ್ಯೈನಿ ಅಸ್ಮಾ ಸಲ್ಡಾನ ಅವರು ವಾಣಿಜ್ಯ ಪೈಲಟ್ ಪರವಾನಗಿ (Commercial Pilot Licence) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶೋಕ್ ಜಾಕೋಬ್ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿಯ ಪುತ್ರಿಯಾಗಿರುವ ಶ್ಯೈನಿ, ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗಿನ ವಿದ್ಯಾಭ್ಯಾಸವನ್ನು ಕಾರ್ಕಳದ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದರು. ಬಾಲ್ಯದಿಂದಲೇ ಆಕಾಶದಲ್ಲಿ ಹಾರುವ ಕನಸು ಕಂಡಿದ್ದ ಅವರು, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣದ ಹಾದಿಯನ್ನು ಆಯ್ಕೆ ಮಾಡಿಕೊಂಡರು.
ಪೈಲಟ್ ತರಬೇತಿಗೆ ಪ್ರವೇಶ ಪಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯ ಪ್ರವೇಶ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ ಶ್ಯೈನಿ, 2023ರ ಆಗಸ್ಟ್ನಲ್ಲಿ ಉತ್ತರ ಪ್ರದೇಶದ ಫುರ್ಸತ್ಗಂಜ್ನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಗೆ ಆಯ್ಕೆಯಾದರು.
ಅಕಾಡೆಮಿಯಲ್ಲಿ ಕಠಿಣವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ವಿಮಾನ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅವರು, ಇದೀಗ ವಾಣಿಜ್ಯ ಪೈಲಟ್ ಪರವಾನಗಿಯನ್ನು ಪಡೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಈ ಮಹತ್ವದ ಸಾಧನೆ ಮಾಡಿರುವುದು ಅವರ ಶ್ರಮ, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ.
ಗ್ರಾಮೀಣ ಪರಿಸರದಿಂದ ಬಂದ ಯುವತಿಯೊಬ್ಬರು ತಮ್ಮ ಕನಸನ್ನು ಬೆನ್ನತ್ತಿ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದು ಕಾರ್ಕಳ ಮಾತ್ರವಲ್ಲದೆ ಇಡೀ ಉಡುಪಿ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ಶ್ಯೈನಿ ಅವರ ಸಾಧನೆ ಸ್ಥಳೀಯ ಯುವತಿಯರು ಹೊಸ ಕನಸುಗಳನ್ನು ಕಾಣಲು ಹಾಗೂ ಸವಾಲುಗಳನ್ನು ಎದುರಿಸಿ ತಮ್ಮ ಗುರಿ ಸಾಧಿಸಲು ಪ್ರೇರಣೆಯಾಗಿದೆ.
ಶ್ಯೈನಿ ಅಸ್ಮಾ ಸಲ್ಡಾನ ಅವರ ಈ ಗಮನಾರ್ಹ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು, ಸ್ನೇಹಿತರು ಹಾಗೂ ಹಿತೈಷಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಹಾಗೂ ಅಂತರರಾಷ್ಟ್ರೀಯ ವಿಮಾನಯಾನ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಹಾರಲಿ ಎಂದು ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಳಗಿರಿಯವರು ಶುಭ ಹಾರೈಸಿದ್ದಾರೆ

