ಮಂಗಳೂರು: ಉದ್ಯೋಗ ಅರಸಿ ಇಸ್ರೇಲ್ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಮಂಗಳೂರಿನ ಶಕ್ತಿನಗರದ ಕಾರ್ಮಿಕ ಕಾಲೋನಿ ನಿವಾಸಿ ಶಡ್ರಕ್ ಇಮ್ಯಾನುವಲ್ (41) ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಅಕ್ಟೋಬರ್ 16ರಿಂದ ಸಂಪರ್ಕಕ್ಕೆ ಸಿಗದೆ ಕುಟುಂಬದವರಲ್ಲಿ ತೀವ್ರ ಆತಂಕ ಮೂಡಿಸಿದ್ದ ಅವರ ಸಾವಿನ ಸುದ್ದಿ ಇದೀಗ ದೃಢಪಟ್ಟಿದ್ದು, ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ಮೂಲದ ಶಡ್ರಕ್ ಅವರು 2025ರ ಮೇ 16ರಂದು ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಉದ್ಯೋಗ ವೀಸಾ ಪಡೆದು ಇಸ್ರೇಲ್ಗೆ ತೆರಳಿದ್ದರು. ನಜರೆತ್ ಸಮೀಪದ ನೊಫ್ ಹಗಲಿಲ್ನ ‘ಯುಸಿಟಿ ಲಿಕ್ವಿಡ್/ಫ್ಲೂಯಿಡ್ ಸೊಲ್ಯೂಷನ್ಸ್’ ಸಂಸ್ಥೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಅಕ್ಟೋಬರ್ 16ರಂದು ರಾತ್ರಿ ಸುಮಾರು 8.05ರ ವೇಳೆಗೆ ಪತ್ನಿ ಹಾಗೂ ಕುಟುಂಬದವರೊಂದಿಗೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ಸುಮಾರು 22 ನಿಮಿಷ ಮಾತನಾಡಿದ್ದರು. ಅದಾದ ಬಳಿಕ ಅವರ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಕೆಲಸಕ್ಕೂ ಹಾಜರಾಗದೆ ನಾಪತ್ತೆಯಾಗಿದ್ದರಿಂದ ಕುಟುಂಬದವರು ಆತಂಕಗೊಂಡಿದ್ದರು.
ಪತಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪತ್ನಿ ಡೇಸಿ ಇಮ್ಯಾನುವಲ್ ಹಾಗೂ ಸಹೋದರಿ ಸವಿತಾ ಅವರು ಮಂಗಳೂರು ಪೊಲೀಸ್ ಆಯುಕ್ತರು, ಜನಪ್ರತಿನಿಧಿಗಳು ಮತ್ತು ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಶಡ್ರಕ್ ಅವರ ಪತ್ತೆಗೆ ನೆರವು ಕೋರಿದ್ದರು. ಆದರೆ, ಇದೀಗ ಲಭ್ಯವಾದ ರಾಯಭಾರ ಕಚೇರಿಯ ದಾಖಲೆಗಳ ಪ್ರಕಾರ, ಅಕ್ಟೋಬರ್ 19ರಂದೇ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಅಂದರೆ ನಾಪತ್ತೆಯಾದ ಕೇವಲ ಮೂರು ದಿನಗಳಲ್ಲೇ ಅವರ ಬದುಕು ಅಂತ್ಯಗೊಂಡಿತ್ತು.
37 ದಿನಗಳ ಬಳಿಕ ತಾಯ್ನಾಡಿಗೆ ಪಾರ್ಥಿವ ಶರೀರ
ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ವಿಭಾಗವು ನವೆಂಬರ್ 9ರಂದು ಶಡ್ರಕ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ನಿರಾಕ್ಷೇಪಣಾ ಪತ್ರ (NOC) ನೀಡಿತ್ತು. ಪತ್ನಿ ಡೇಸಿ ಅವರ ಕೋರಿಕೆಯಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಸ್ವೀಕರಿಸಲು ಸಹೋದರಿ ಸವಿತಾ ಕೆ.ಎಸ್. ಮತ್ತು ಚಂದ್ರಮೋಹನ ಚಂದ್ರನ್ ಅವರಿಗೆ ರಾಯಭಾರ ಕಚೇರಿ ಅನುಮತಿ ನೀಡಿತ್ತು.
ಅದರಂತೆ ವಿದೇಶದಲ್ಲಿ ಮೃತಪಟ್ಟ 37 ದಿನಗಳ ಬಳಿಕ ಶಡ್ರಕ್ ಅವರ ಪಾರ್ಥಿವ ಶರೀರ ತಾಯ್ನಾಡು ಮಂಗಳೂರಿಗೆ ತಲುಪಿದೆ. ಮಗನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಅವರ ಪಾರ್ಥಿವ ಶರೀರವನ್ನು ಸ್ವೀಕರಿಸುವ ಅನಿವಾರ್ಯತೆ ಎದುರಾಗಿರುವುದು ದುಃಖದ ಸಂಗತಿಯಾಗಿದೆ.
ಇಂದು ಅಂತ್ಯಕ್ರಿಯೆ
ನವೆಂಬರ್ 25ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಶಡ್ರಕ್ ಅವರ ಪಾರ್ಥಿವ ಶರೀರವನ್ನು ಶಕ್ತಿನಗರದ ಕಾರ್ಮಿಕ ಕಾಲೋನಿ 1ನೇ ಕ್ರಾಸ್ನಲ್ಲಿರುವ ‘ಅಮೇಜಿಂಗ್ ಗ್ರೇಸ್’ ನಿವಾಸಕ್ಕೆ ತರಲಾಗುತ್ತದೆ. ಬಳಿಕ ಸಂಜೆ 4 ಗಂಟೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಮಂಗಳೂರಿನ ಗೋರಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉದ್ಯೋಗ ಮತ್ತು ಉತ್ತಮ ಭವಿಷ್ಯದ ನಿರೀಕ್ಷೆಯೊಂದಿಗೆ ವಿದೇಶಕ್ಕೆ ತೆರಳಿದ್ದ ಶಡ್ರಕ್ ಅವರ ಅಕಾಲಿಕ ಸಾವು ಕುಟುಂಬದ ಪಾಲಿಗೆ ಮರೆಯಲಾಗದ ಆಘಾತವಾಗಿದೆ. ಅವರ ಸಾವಿನ ಹಿಂದಿನ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಬೇಕಿದ್ದು, ಕುಟುಂಬದವರಿಗೆ ಅಗತ್ಯ ನೆರವು ಹಾಗೂ ಸೂಕ್ತ ಮಾಹಿತಿ ದೊರೆಯುವಂತಾಗಬೇಕಿದೆ.

