ಮಂಗಳೂರು, ಆ.11: ಶೀಟ್ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ವೇಳೆ ಕಬ್ಬಿಣದ ರಾಡ್ ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ ಗುತ್ತಿಗೆದಾರರೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್ನಲ್ಲಿ ಸಂಭವಿಸಿದೆ.
ಮೃತರನ್ನು ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣ ಸಮೀಪದ ನಿವಾಸಿ ಹಾಗೂ ಶೀಟ್ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ಗುತ್ತಿಗೆದಾರ ಭಾಸ್ಕರ ಎಂದು ಗುರುತಿಸಲಾಗಿದೆ.
ಕೃಷ್ಣಾಪುರ 6ನೇ ಬ್ಲಾಕ್ನಲ್ಲಿರುವ ವಸತಿ ಸಮುಚ್ಚಯವೊಂದರಲ್ಲಿ ತಗುಡು ಶೀಟ್ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಯ ಭಾಗವಾಗಿ ಭಾಸ್ಕರ ಅವರು ಕಬ್ಬಿಣದ ರಾಡ್ ಬಳಸಿ ಅಳತೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕಬ್ಬಿಣದ ರಾಡ್ ಅನ್ನು ಕಂಕುಳಲ್ಲಿಟ್ಟುಕೊಂಡು ತಿರುಗುತ್ತಿದ್ದ ಸಂದರ್ಭದಲ್ಲಿ, ಕಟ್ಟಡದ ಪಕ್ಕದಲ್ಲೇ ಹಾದುಹೋಗುತ್ತಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ರಾಡ್ ಆಕಸ್ಮಿಕವಾಗಿ ಸ್ಪರ್ಶಿಸಿದೆ ಎನ್ನಲಾಗಿದೆ.
ತಂತಿಗೆ ರಾಡ್ ತಾಗುತ್ತಿದ್ದಂತೆಯೇ ಭಾರೀ ಪ್ರಮಾಣದ ವಿದ್ಯುತ್ ಪ್ರವಹಿಸಿದ್ದು, ತೀವ್ರ ವಿದ್ಯುತ್ ಆಘಾತಕ್ಕೊಳಗಾದ ಭಾಸ್ಕರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ತಿಳಿದು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಭಾಸ್ಕರ ಅವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಹೈಟೆನ್ಷನ್ ವಿದ್ಯುತ್ ಮಾರ್ಗಗಳ ಸಮೀಪ ನಿರ್ಮಾಣ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.






