ಮಂಗಳೂರು, ಆ.12: ನಗರದ ಕೆನರಾ ಕಾಲೇಜು (ಸ್ವಾಯತ್ತ)ದ ತುಳು ಸಂಘದ ಆಶ್ರಯದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಸಡಗರ-ಸಂಭ್ರಮದಿಂದ ನಡೆಯಿತು.
ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳು ಹಾಗೂ ಆಟಿ ತಿಂಗಳ ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತುಳುನಾಡಿನ ಸಾಂಪ್ರದಾಯಿಕ ಜೀವನ ಪದ್ಧತಿ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ. ವಹಿಸಿದ್ದರು. ತುಳು ಭಾಷೆಯಲ್ಲೇ ಮಾತನಾಡಿದ ಅವರು, ಆಟಿ ತಿಂಗಳ ಮಹತ್ವವನ್ನು ವಿವರಿಸುವುದರೊಂದಿಗೆ, ತುಳುನಾಡಿನ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಇಂದಿನ ಯುವಜನತೆ ಅರಿತು, ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತುಳುವರ್ಲ್ಡ್ ಫೌಂಡೇಶನ್, ಕಟೀಲು ಇದರ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಭಾಗವಹಿಸಿದ್ದರು. ‘ತುಳುನಾಡಿನ ಸಂಸ್ಕೃತಿ ಬೊಕ್ಕ ಆಚರಣೆಲು’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ‘ಆಟಿಡೊಂಜಿ ದಿನ’ ಆಚರಣೆಯ ಹಿನ್ನೆಲೆ, ಆಟಿ ತಿಂಗಳ ಜೀವನ ಪದ್ಧತಿ, ಆ ಕಾಲದ ಆಹಾರ ಪದ್ಧತಿ, ಆಚರಣೆಗಳು ಹಾಗೂ ತುಳುನಾಡಿನ ಸಾಂಪ್ರದಾಯಿಕ ಜ್ಞಾನ ಪರಂಪರೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳು ಕೇವಲ ಹಿಂದಿನ ಕಾಲದ ನೆನಪುಗಳಾಗದೆ, ಅವುಗಳ ಹಿಂದಿರುವ ವೈಜ್ಞಾನಿಕ, ಸಾಮಾಜಿಕ ಹಾಗೂ ಪರಿಸರಾತ್ಮಕ ಮಹತ್ವವನ್ನು ಅರಿತು ಇಂದಿನ ಬದುಕಿನಲ್ಲೂ ಅವುಗಳನ್ನು ಅರ್ಥಪೂರ್ಣವಾಗಿ ಮುಂದುವರಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ತುಳು ಭಾಷೆ, ನಾಡು, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಸಕ್ತಿ ಹಾಗೂ ಅಭಿಮಾನ ಮೂಡಿಸುವಂತಿದ್ದು, ತುಳುನಾಡಿನ ಸಾಂಸ್ಕೃತಿಕ ವೈವಿಧ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಯಿತು.

