ಬಂಟ್ವಾಳ, ಆ. 6: ಬಿ.ಸಿ.ರೋಡ್ ಸಮೀಪದ ಎನ್.ಜಿ. ಸರ್ಕಲ್ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ನ ಹಿಂಬದಿ ಸವಾರ ಮೃತಪಟ್ಟಿದ್ದು, ಪ್ರಕರಣ ಸಂಬಂಧ ಟಿಪ್ಪರ್ ಚಾಲಕನನ್ನು ಬಂಟ್ವಾಳ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಬಂಟ್ವಾಳ ತಾಲೂಕಿನ ಪಲ್ಲಂಬೆಟ್ಟು ನಿವಾಸಿ ಸಲ್ಮಾನ್ ಫಾರೂಕ್ (33) ಚಾಲನೆ ಮಾಡುತ್ತಿದ್ದ ಟಿಪ್ಪರ್ ಲಾರಿಯು ಅತಿವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸುತ್ತಿದ್ದ ವೇಳೆ ಮಂಗಳೂರಿನಿಂದ ಧರ್ಮಸ್ಥಳದ ಕಡೆಗೆ ಸರ್ವಿಸ್ ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತ ಗುರುವಾರ ಸಂಜೆ ಸುಮಾರು 6 ಗಂಟೆಗೆ ನಡೆದಿದೆ.
ಡಿಕ್ಕಿಯ ಪರಿಣಾಮ ಸ್ಕೂಟರ್ ಸವಾರ ದಯಾನಂದ ಹಾಗೂ ಹಿಂಬದಿ ಸವಾರ ಯಶ್ವಂತ್ ಕುಲಾಲ್ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ತಕ್ಷಣ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯಶ್ವಂತ್ ಕುಲಾಲ್ ಅವರು ಮಧ್ಯರಾತ್ರಿ ಮೃತಪಟ್ಟಿದ್ದಾರೆ. ದಯಾನಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 99/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(ಎ) ಮತ್ತು 106(1)ರಡಿ ಪ್ರಕರಣ ದಾಖಲಿಸಲಾಗಿದ್ದು, ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದೇ ವೇಳೆ, ಅಪಘಾತದ ಕುರಿತು ಮತ್ತೊಂದು ಮಾಹಿತಿ ಕೂಡ ಕೇಳಿಬಂದಿದೆ. ಅದರ ಪ್ರಕಾರ, ಪೊಲೀಸರು ಸ್ಕೂಟರ್ ಸವಾರನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದಾಗ, ಆತ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿ ಬಲಕ್ಕೆ ತಿರುಗಿಸುವ ಸಂದರ್ಭದಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ಇದೇ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ವಾಹನ ಅದರ ಮೇಲೆ ಹರಿದಿದೆ ಎನ್ನಲಾಗಿದೆ.
ಆದರೆ ಈ ಮಾಹಿತಿ ಕುರಿತು ಪೊಲೀಸರು ಇನ್ನೂ ಅಧಿಕೃತವಾಗಿ ದೃಢೀಕರಣ ನೀಡಿಲ್ಲ. ಅಪಘಾತದ ನಿಖರ ಕಾರಣ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ




