ಉಡುಪಿ/ಬ್ರಹ್ಮಾವರ: ಆರೂರು ಗ್ರಾಮದ ಅಡ್ಜಿಲು ಭಾಗದಲ್ಲಿ ಪದೇಪದೇ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ತುಳುನಾಡು ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಮೆಸ್ಕಾಂ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಅಡ್ಜಿಲು ಭಾಗದಲ್ಲಿ ಸುಮಾರು 100ರಿಂದ 150ಕ್ಕೂ ಹೆಚ್ಚು ಮನೆಗಳು ಇರುವುದರಿಂದ ಪ್ರಸ್ತುತ ವಿದ್ಯುತ್ ಪರಿವರ್ತಕದ (ಟಿಸಿ) ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಇದರಿಂದ ಕಳೆದ ಮೂರು ವರ್ಷಗಳಿಂದ ಪದೇಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ತುಳುನಾಡು ರಕ್ಷಣಾ ವೇದಿಕೆ ವತಿಯಿಂದ ಮೆಸ್ಕಾಂ ಬ್ರಹ್ಮಾವರ ಅಧಿಕಾರಿಗಳಿಗೆ ಹೊಸ ಟಿಸಿ ಅಳವಡಿಸುವಂತೆ ಮನವಿ ಸಲ್ಲಿಸಲಾಗಿತ್ತು.
ಮನವಿಗೆ ಸ್ಪಂದಿಸಿದ ಮೆಸ್ಕಾಂ ಬ್ರಹ್ಮಾವರ ಕಾರ್ಯ ಮತ್ತು ಪಾಲನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಸಮಸ್ಯೆಯನ್ನು ಪರಿಶೀಲಿಸಿದರು. ಅಡ್ಜಿಲು ಭಾಗದ ವಿದ್ಯುತ್ ಬೇಡಿಕೆ ಹಾಗೂ ಮನೆಗಳ ಸಂಖ್ಯೆಯನ್ನು ಪರಿಗಣಿಸಿ ಶೀಘ್ರದಲ್ಲೇ ಹೊಸ ಟಿಸಿ ಅಳವಡಿಸಿಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಇತರ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.
ತುಳುನಾಡು ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಮಾತನಾಡಿ, “ಅಡ್ಜಿಲು ಭಾಗದ ವಿದ್ಯುತ್ ಸಮಸ್ಯೆ ಕಳೆದ ಮೂರು ವರ್ಷಗಳಿಂದ ಮುಂದುವರಿದಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಹೆಚ್ಚುವರಿ ಟಿಸಿ ಅತ್ಯಗತ್ಯವಾಗಿದೆ. ನಮ್ಮ ಮನವಿಗೆ ಸ್ಪಂದಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದು ಸ್ವಾಗತಾರ್ಹ. ಆದರೆ ಒಂದು ತಿಂಗಳೊಳಗೆ ಹೊಸ ಟಿಸಿ ಅಳವಡಿಸಿ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ವಿಳಂಬವಾದಲ್ಲಿ ಮೆಸ್ಕಾಂ ಕಚೇರಿ ಎದುರು ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಮಾತನಾಡಿ, ಗ್ರಾಮಸ್ಥರ ಪರವಾಗಿ ತುಳುನಾಡು ರಕ್ಷಣಾ ವೇದಿಕೆ ಸಲ್ಲಿಸಿರುವ ಮನವಿಗೆ ಮೆಸ್ಕಾಂ ಅಧಿಕಾರಿಗಳು ಶೀಘ್ರ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಶರತ್ ರಾಜ್ ಆರೂರು ಮಾತನಾಡಿ, “ಆರೂರು ಅಡ್ಜಿಲು ಭಾಗಕ್ಕೆ ಹೆಚ್ಚುವರಿ ಒಂದು ಟಿಸಿ ತುರ್ತಾಗಿ ಅಗತ್ಯವಿದೆ. ವಿದ್ಯುತ್ ವ್ಯತ್ಯಯದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ, ಕೃಷಿ ಹಾಗೂ ಕೂಲಿ ಕಾರ್ಮಿಕರಿಗೂ ವಿದ್ಯುತ್ ಅತ್ಯಗತ್ಯವಾಗಿದೆ. ಆದ್ದರಿಂದ ಪದೇಪದೇ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಹೊಸ ಟಿಸಿ ಅಳವಡಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮನೋಜ್, ಮೆಸ್ಕಾಂ ಅಧಿಕಾರಿ ಮಲ್ಲಿಕಾರ್ಜುನ್, ಬ್ರಹ್ಮಾವರ ತಾಲೂಕು ಸಂಘಟನೆಯ ಗೌರವಾಧ್ಯಕ್ಷ ಪ್ರದೀಪ್ ದೀಪು ಚಾಂತರ್, ಸದಸ್ಯರಾದ ವಿಜಯ್ ಆರೂರು, ರಾಕೇಶ್ ಆರೂರು, ರವಿ ಆರೂರು, ರಮೇಶ್ ಉಡುಪಿ, ಗೋಪಾಲ್ ತೆಂಕಬೆಟ್ಟು, ದಿನೇಶ್ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆರೂರು ಅಡ್ಜಿಲು ಭಾಗದ ಹಿರಿಯರಾದ ರಾಮ ಪೂಜಾರಿ ಅವರು ಮಾತನಾಡಿ, ಗ್ರಾಮಸ್ಥರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ಗ್ರಾಮದ ಹಿರಿಯರು, ಮಹಾಲಿಂಗೇಶ್ವರ ಯುವಕ ಮಂಡಲದ ಯುವಕರು ಹಾಗೂ ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳದಲ್ಲಿ ಉಪಸ್ಥಿತರಿದ್ದು, ಹೊಸ ಟಿಸಿ ಅಳವಡಿಸುವಂತೆ ಒತ್ತಾಯಿಸಿದರು. ಮಹಿಳೆಯರಾದ ಯಶೋಧ, ಪೂರ್ಣಿಮಾ, ಶೋಭಾ, ರಜನಿ ಹಾಗೂ ಸುರೇಖಾ ಅವರು ಮಾತನಾಡಿ, “ನಮ್ಮ ದೈನಂದಿನ ಜೀವನ, ಜಾನುವಾರು ಸಾಕಣೆ, ಕೃಷಿ ಮತ್ತು ಕೂಲಿ ಕೆಲಸಗಳಿಗೆ ವಿದ್ಯುತ್ ಅತ್ಯಂತ ಅಗತ್ಯವಾಗಿದೆ. ಪದೇಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಶೀಘ್ರ ಹೊಸ ಟಿಸಿ ಅಳವಡಿಸಿ ಸಮಸ್ಯೆಯಿಂದ ಮುಕ್ತಿ ನೀಡಬೇಕು” ಎಂದು ಆಗ್ರಹಿಸಿದರು.
ಗ್ರಾಮಸ್ಥರು ಒಗ್ಗಟ್ಟಿನಿಂದ ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು, ನಿಗದಿತ ಅವಧಿಯೊಳಗೆ ಹೊಸ ಟಿಸಿ ಅಳವಡಿಸಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದು, ಗ್ರಾಮಸ್ಥರ ವಿದ್ಯುತ್ ಸಮಸ್ಯೆಯನ್ನು ಮಾಧ್ಯಮಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಸಹಕರಿಸಿದರು.

