ಉಡುಪಿ: ಬ್ರಹ್ಮಾವರ ಸಮೀಪದ ಕಲ್ಲುಗೊಳಿ ಸರ್ಕಾರಿ ಹಾಡಿಯಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಉಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಂಧಿತರನ್ನು ಸುಕೇಶ್ ಶೆಟ್ಟಿ ಹಾಗೂ ಪ್ರತಾಪ್ ಶೆಟ್ಟಿ ಎಂದು ಗುರುತಿಸಲಾಗಿದ್ದು, ವಿಜಯ ನಾಯ್ಕ್ ಮುದ್ದುಮನೆ, ಗಣೇಶ್ ಬೆಳ್ವೆ, ಬಾಲಕೃಷ್ಣ ಕೀರಾಡಿ ಸೇರಿದಂತೆ ಇನ್ನಿತರರು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜುಲೈ 19ರಂದು ಬ್ರಹ್ಮಾವರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಜಯಕರ ಎ. ಅವರಿಗೆ ದೊರೆತ ಮಾಹಿತಿಯಂತೆ, 34ನೇ ಕುದಿ ಗ್ರಾಮದ ನುಕ್ಕೂರು ವ್ಯಾಪ್ತಿಯ ಕಲ್ಲುಗೊಳಿ ಸರ್ಕಾರಿ ಹಾಡಿಯಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಲಾಯಿತು. ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಜೂಜಾಟದಲ್ಲಿ ತೊಡಗಿದ್ದವರು ಓಡಿಹೋಗಲು ಯತ್ನಿಸಿದ್ದು, ಸಿಬ್ಬಂದಿ ಸುಕೇಶ್ ಶೆಟ್ಟಿ ಮತ್ತು ಪ್ರತಾಪ್ ಶೆಟ್ಟಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಆರೋಪಿಗಳಿಂದ ಜೂಜಾಟಕ್ಕೆ ಬಳಸಲಾಗಿದ್ದ ₹21,700 ನಗದು, ಇಸ್ಪೀಟು ಎಲೆಗಳು, ಒಂದು ಕಂದು ಬಣ್ಣದ ಬೆಡ್ಶೀಟ್, MH-05-FP-6501 ಹಾಗೂ KA-19-P-7890 ನೋಂದಣಿಯ ಎರಡು ಕಾರುಗಳು ಮತ್ತು KA-20-HD-2299 ನೋಂದಣಿಯ ಒಂದು ಸ್ಕೂಟರ್ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಾಹನಗಳ ಮೌಲ್ಯ ಸುಮಾರು ₹6.20 ಲಕ್ಷ ಆಗಿದ್ದು, ನಗದು ಸೇರಿ ಒಟ್ಟು ವಶಪಡಿಸಿಕೊಂಡ ಆಸ್ತಿಯ ಮೌಲ್ಯ ₹6.41 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 128/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ (KP Act) ಕಲಂ 87 ಅನ್ವಯ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

