ಉಡುಪಿ, ಜುಲೈ 18: ಉಡುಪಿ ಜಿಲ್ಲೆಯ ಸಂತೆಕಟ್ಟೆ ಪ್ರದೇಶದಲ್ಲಿ ಸುಮಾರು ಐವತ್ತು ವರ್ಷಗಳಿಂದ ಸಾರ್ವಜನಿಕರಿಗೆ ವಿಶಾಲವಾದ ನೆರಳು, ಶುದ್ಧ ಗಾಳಿ ಹಾಗೂ ಪರಿಸರ ಸಮತೋಲನವನ್ನು ಒದಗಿಸುತ್ತಿದ್ದ ಬೃಹತ್ ಮರವನ್ನು ಏಕಾಏಕಿ ಕಡಿದು ಹಾಕಿರುವ ಘಟನೆಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ತೀವ್ರ ಆಕ್ರೋಶ ಹಾಗೂ ಖಂಡನೆ ವ್ಯಕ್ತಪಡಿಸಿದೆ.
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರಾಂಕಿ ಡಿಸೋಜ ಕೊಳಲಗಿರಿ ಮಾತನಾಡಿ, ದಶಕಗಳಿಂದ ಸಾವಿರಾರು ಸಾರ್ವಜನಿಕರಿಗೆ ಆಶ್ರಯ ನೀಡುತ್ತಿದ್ದ, ಪರಿಸರದ ಅಮೂಲ್ಯ ಸಂಪತ್ತಾಗಿದ್ದ ಮರವನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹಾಗೂ ಸಾರ್ವಜನಿಕರ ಭಾವನೆಗಳನ್ನು ಲೆಕ್ಕಿಸದೆ ಕಡಿದು ಹಾಕಿರುವುದು ಅತ್ಯಂತ ದುಃಖಕರ ಮತ್ತು ಖಂಡನೀಯ ಕೃತ್ಯವಾಗಿದೆ. ಇದು ಕೇವಲ ಒಂದು ಮರದ ನಾಶವಲ್ಲ, ಪ್ರಕೃತಿಯ ಮೇಲಿನ ಕ್ರೌರ್ಯ ಹಾಗೂ ಪರಿಸರ ಸಂರಕ್ಷಣೆಯ ಮೌಲ್ಯಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ, ಅತಿಯಾದ ಉಷ್ಣಾಂಶ ಹಾಗೂ ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ, ಹಳೆಯ ಮರಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ದಶಕಗಳ ಇತಿಹಾಸ ಹೊಂದಿರುವ ಮರಗಳನ್ನು ಮನಬಂದಂತೆ ಕಡಿದು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ರೀತಿಯ ಕ್ರಮಗಳು ಮುಂದಿನ ಪೀಳಿಗೆಗೆ ಮಾರಕ ಪರಿಣಾಮ ಉಂಟುಮಾಡಲಿವೆ ಎಂದು ಅವರು ಎಚ್ಚರಿಸಿದರು.

ಮರ ಕಡಿತಕ್ಕೆ ಸಂಬಂಧಿಸಿದಂತೆ ಯಾವ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ, ಪರಿಸರ ಇಲಾಖೆಯ ನಿಯಮಗಳನ್ನು ಪಾಲಿಸಲಾಗಿದೆಯೇ ಹಾಗೂ ಮರ ತೆರವುಗೊಳಿಸುವ ಅಗತ್ಯ ಏನಿತ್ತು ಎಂಬುದರ ಕುರಿತು ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಬೇಕು. ನಿಯಮ ಉಲ್ಲಂಘನೆ ಅಥವಾ ಅಧಿಕಾರ ದುರುಪಯೋಗ ಕಂಡುಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಬಂಧಪಟ್ಟವರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಕಡಿದು ಹಾಕಲಾದ ಮರದ ಸ್ಥಳದಲ್ಲಿ ತಕ್ಷಣವೇ ದೊಡ್ಡ ಗಾತ್ರದ ಸ್ಥಳೀಯ ಜಾತಿಯ ಹಲವು ಗಿಡಗಳನ್ನು ನೆಟ್ಟು ಅವುಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಉಡುಪಿ ಜಿಲ್ಲೆಯಾದ್ಯಂತ 25 ವರ್ಷಕ್ಕಿಂತ ಹಳೆಯ ಮರಗಳನ್ನು ಗುರುತಿಸಿ ಅವುಗಳನ್ನು “ಪರಂಪರೆ ಮರಗಳು” ಎಂದು ಘೋಷಿಸಿ ಸಂರಕ್ಷಿಸಲು ವಿಶೇಷ ಯೋಜನೆ ರೂಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪರಿಸರ ರಕ್ಷಣೆಯ ವಿಚಾರದಲ್ಲಿ ತುಳುನಾಡ ರಕ್ಷಣಾ ವೇದಿಕೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಜನರ ಆರೋಗ್ಯ, ಪರಿಸರ ಹಾಗೂ ಮುಂದಿನ ಪೀಳಿಗೆಯ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮದ ವಿರುದ್ಧ ಸಂಘಟನೆಯು ರಾಜ್ಯಾದ್ಯಕ್ಷರಾದ ಯೋಗಿಶ್ ಶೆಟ್ಟಿಜಪ್ಪುಯವರ ನೇತ್ರತ್ವದಲ್ಲಿ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಹೋರಾಟವನ್ನು ಮುಂದುವರಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾಗೂ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

