ಮಂಗಳೂರು, ಜುಲೈ 18: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಪ್ರಧಾನಮಂತ್ರಿ ಹಾಗೂ ಜನತಾದಳ (ಜಾತ್ಯತೀತ)ದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರ ಕುಟುಂಬದ ಹಿರಿಯ ಸದಸ್ಯೆ ಶ್ರೀಮತಿ ಚೆನ್ನಮ್ಮ ದೇವೆಗೌಡ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಅವರ ಅಗಲಿಕೆಯು ದೇವೇಗೌಡರ ಕುಟುಂಬಕ್ಕೆ ಮಾತ್ರವಲ್ಲದೆ, ಜನತಾದಳ (ಜಾತ್ಯತೀತ) ಪಕ್ಷದ ಸಮಸ್ತ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಅಪಾರ ನೋವನ್ನುಂಟು ಮಾಡಿದ್ದು, ತುಂಬಲಾರದ ನಷ್ಟವಾಗಿದೆ ಎಂದು ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂತಾಪ ಸಂದೇಶ ನೀಡಿರುವ ಅವರು, ಶ್ರೀಮತಿ ಚೆನ್ನಮ್ಮ ದೇವೆಗೌಡ ಅವರು ಸರಳತೆ, ಸೌಜನ್ಯ, ಮಾನವೀಯ ಮೌಲ್ಯಗಳು ಹಾಗೂ ಕುಟುಂಬದ ಒಗ್ಗಟ್ಟಿನ ಪ್ರತೀಕವಾಗಿದ್ದರು. ತಮ್ಮ ಜೀವನದುದ್ದಕ್ಕೂ ಕುಟುಂಬದ ಆಧಾರಸ್ತಂಭವಾಗಿ ನಿಂತು ಉತ್ತಮ ಸಂಸ್ಕಾರ, ಸೇವಾ ಮನೋಭಾವ ಹಾಗೂ ಸಾಮಾಜಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ನೀಡಿದ ಆದರ್ಶ ವ್ಯಕ್ತಿತ್ವ ಅವರದ್ದಾಗಿತ್ತು. ಅವರ ಜೀವನ ಶೈಲಿ ಎಲ್ಲರಿಗೂ ಪ್ರೇರಣೆಯಾಗಿದ್ದು, ಅವರ ಸೌಮ್ಯ ಸ್ವಭಾವ, ಪ್ರೀತಿ ಮತ್ತು ಸೇವಾ ಮನೋಭಾವ ಸದಾ ಸ್ಮರಣೀಯವಾಗಿರಲಿದೆ ಎಂದು ತಿಳಿಸಿದ್ದಾರೆ.
ಅವರ ಅಗಲಿಕೆಯಿಂದ ದೇವೇಗೌಡರ ಕುಟುಂಬವು ಅಪಾರ ದುಃಖವನ್ನು ಅನುಭವಿಸುತ್ತಿದೆ. ಈ ದುಃಖದ ಸಂದರ್ಭದಲ್ಲಿ ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ದೇವೇಗೌಡರ ಕುಟುಂಬದೊಂದಿಗೆ ದುಃಖದಲ್ಲಿ ಭಾಗಿಯಾಗಿದ್ದಾರೆ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕುಟುಂಬದ ಎಲ್ಲ ಸದಸ್ಯರಿಗೆ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
“ಶ್ರೀಮತಿ ಚೆನ್ನಮ್ಮ ದೇವೆಗೌಡ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಹಾಗೂ ಸದ್ಗತಿಯನ್ನು ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವೇಗೌಡರ ಕುಟುಂಬದ ಎಲ್ಲ ಸದಸ್ಯರಿಗೆ ನೀಡಲಿ. ಈ ದುಃಖದ ಸಂದರ್ಭದಲ್ಲಿ ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪರವಾಗಿ ನಮ್ಮ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಕುಟುಂಬದ ದುಃಖದಲ್ಲಿ ನಾವು ಸದಾ ಜೊತೆಗಿದ್ದೇವೆ” ಎಂದು ಜಿಲ್ಲಾಾಧ್ಯಕ್ಷ ಜಾಕೆ ಮಾಧವ ಗೌಡ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
– ಜಾಕೆ ಮಾಧವ ಗೌಡ
ಜಿಲ್ಲಾಧ್ಯಕ್ಷರು
ಜನತಾದಳ (ಜಾತ್ಯತೀತ), ದಕ್ಷಿಣ ಕನ್ನಡ ಜಿಲ್ಲಾ ಘಟಕ

