125ಕ್ಕೂ ಅಧಿಕ ತೂಗುಸೇತುವೆಗಳ ನಿರ್ಮಾಣದ ಮೂಲಕ ಗ್ರಾಮೀಣ ಭಾರತಕ್ಕೆ ಹೊಸ ಸಂಪರ್ಕ ಕಲ್ಪಿಸಿದ್ದ ‘ಬ್ರಿಡ್ಜ್ಮ್ಯಾನ್ ಆಫ್ ಇಂಡಿಯಾ’ ಇನ್ನಿಲ್ಲ
ಸುಳ್ಯ, ಜುಲೈ 7: ತೂಗುಸೇತುವೆಗಳ ನಿರ್ಮಾಣದ ಮೂಲಕ ದೇಶದ ಗ್ರಾಮೀಣ ಭಾಗಗಳಿಗೆ ಹೊಸ ಬದುಕಿನ ದಾರಿ ತೋರಿದ್ದ, ‘ಬ್ರಿಡ್ಜ್ಮ್ಯಾನ್ ಆಫ್ ಇಂಡಿಯಾ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ ಅವರು ಮಂಗಳವಾರ ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಹೃದಯ ಸಂಬಂಧಿ ಅನಾರೋಗ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದರು. ಅವರ ಅಗಲಿಕೆಯಿಂದ ದೇಶವು ಗ್ರಾಮೀಣ ಮೂಲಸೌಕರ್ಯ ಕ್ಷೇತ್ರದ ಅಪರೂಪದ ಸಾಧಕನನ್ನು ಕಳೆದುಕೊಂಡಂತಾಗಿದೆ.
ದೇಶದಾದ್ಯಂತ ಹಳ್ಳಿಗಳನ್ನು ಸಂಪರ್ಕಿಸುವ ಉದ್ದೇಶದಿಂದ 125ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ಸಾವಿರಾರು ಗ್ರಾಮಸ್ಥರ ಬದುಕಿಗೆ ಹೊಸ ದಾರಿಯನ್ನು ತೆರೆದಿದ್ದ ಡಾ. ಭಾರದ್ವಾಜ ಅವರಿಗೆ ‘ಸೇತುಬಂಧು’ ಹಾಗೂ ‘ಬ್ರಿಡ್ಜ್ಮ್ಯಾನ್ ಆಫ್ ಇಂಡಿಯಾ’ ಎಂಬ ಗೌರವ ಬಿರುದುಗಳು ಲಭಿಸಿದ್ದವು. ಅವರ ಅಸಾಧಾರಣ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 2017ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
1989ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅರಂಬೂರು ಗ್ರಾಮದ ಪಯಸ್ವಿನಿ ನದಿಗೆ ಅಡ್ಡಲಾಗಿ ತಮ್ಮ ಮೊದಲ ತೂಗುಸೇತುವೆಯನ್ನು ನಿರ್ಮಿಸುವ ಮೂಲಕ ಅವರು ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ್ದರು. ಬಳಿಕ ಕೇರಳದಲ್ಲಿ ಸುಮಾರು 30, ಆಂಧ್ರಪ್ರದೇಶ ಹಾಗೂ ಒಡಿಶಾದಲ್ಲಿ ತಲಾ ಎರಡು ತೂಗುಸೇತುವೆಗಳನ್ನು ನಿರ್ಮಿಸಿದ್ದು, ಉಳಿದ ಬಹುತೇಕ ಸೇತುವೆಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಿರ್ಮಾಣಗೊಂಡಿವೆ.
ಕಡಿಮೆ ವೆಚ್ಚದಲ್ಲಿ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಿ ಗ್ರಾಮೀಣ ಜನರ ಸಂಚಾರದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದ ಡಾ. ಗಿರೀಶ್ ಭಾರದ್ವಾಜ ಅವರ ಸೇವೆ ಸದಾ ಸ್ಮರಣೀಯವಾಗಿದ್ದು, ಅವರ ಅಗಲಿಕೆ ಗ್ರಾಮೀಣಾಭಿವೃದ್ಧಿ ಹಾಗೂ ಇಂಜಿನಿಯರಿಂಗ್ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

