ಮಂಗಳೂರು, ಜುಲೈ 7: ದೇಶದ ಗ್ರಾಮೀಣ ಭಾಗಗಳಿಗೆ ತೂಗುಸೇತುವೆಗಳ ನಿರ್ಮಾಣದ ಮೂಲಕ ಶಾಶ್ವತ ಸಂಪರ್ಕ ಕಲ್ಪಿಸಿ, ಲಕ್ಷಾಂತರ ಜನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದ್ದ ‘ಬ್ರಿಡ್ಜ್ಮ್ಯಾನ್ ಆಫ್ ಇಂಡಿಯಾ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ ಅವರ ನಿಧನಕ್ಕೆ ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಘಟಕವು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಗ್ರಾಮೀಣ ಭಾರತದ ಅಭಿವೃದ್ಧಿಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದ ಡಾ. ಗಿರೀಶ್ ಭಾರದ್ವಾಜ ಅವರು 125ಕ್ಕೂ ಅಧಿಕ ತೂಗುಸೇತುವೆಗಳನ್ನು ನಿರ್ಮಿಸುವ ಮೂಲಕ ಸಾವಿರಾರು ಗ್ರಾಮಗಳ ಜನರಿಗೆ ಸುರಕ್ಷಿತ ಸಂಚಾರದ ವ್ಯವಸ್ಥೆ ಕಲ್ಪಿಸಿ, ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆದಿದ್ದರು. ಕಡಿಮೆ ವೆಚ್ಚದ, ಪರಿಸರ ಸ್ನೇಹಿ ತಂತ್ರಜ್ಞಾನದ ಮೂಲಕ ಗ್ರಾಮೀಣ ಮೂಲಸೌಕರ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯ ಹಾಗೂ ಅನುಕರಣೀಯವಾಗಿದೆ.
ಪದ್ಮಶ್ರೀ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಗೌರವಗಳಿಗೆ ಭಾಜನರಾಗಿದ್ದ ಅವರು ತಮ್ಮ ಸಾಧನೆಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಕಂಗೊಳಿಸುವಂತೆ ಮಾಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನ ಸುಧಾರಣೆಗೆ ಅವರು ತೋರಿದ ಬದ್ಧತೆ, ಸೇವಾ ಮನೋಭಾವ ಮತ್ತು ಕಾರ್ಯಶೈಲಿ ಎಲ್ಲರಿಗೂ ಪ್ಣೆಯಾಗಿದೆ.
ಡಾ. ಗಿರೀಶ್ ಭಾರದ್ವಾಜ ಅವರ ಅಗಲಿಕೆಯು ಗ್ರಾಮೀಣಾಭಿವೃದ್ಧಿ, ಇಂಜಿನಿಯರಿಂಗ್ ಕ್ಷೇತ್ರ ಹಾಗೂ ಸಮಾಜಸೇವೆಗೆ ತುಂಬಲಾರದ ನಷ್ಟವಾಗಿದೆ. ಅವರ ಆದರ್ಶ, ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳು ಮುಂದಿನ ಪೀಳಿಗೆಗೆ ಸದಾ ಮಾರ್ಗದರ್ಶಿಯಾಗಲಿವೆ.
ದಿವಂಗತ ಡಾ. ಗಿರೀಶ್ ಭಾರದ್ವಾಜ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇವೆ. ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ
ಎಂದು ಜೆಡಿಎಸ್ ಜಿಲ್ಲಾದ್ಯಕ್ಷ ಜಾಕೆ ಮಾಧವ ಗೌಡರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

