ಉಡುಪಿ, ಜೂನ್ 29: ಸಾರ್ವಜನಿಕ ಸ್ಥಳಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಕುಡುಕರ ಹಾವಳಿ ನಿಯಂತ್ರಿಸಿ, ನಿರ್ಗತಿಕರಿಗೆ ಸೂಕ್ತ ಪರ್ಯಾಯ ಆಶ್ರಯ ಕಲ್ಪಿಸಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಉಡುಪಿ ನಗರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರು ಹಾಗೂ ನಿರ್ಗತಿಕರ ಹಾವಳಿ ಹೆಚ್ಚಾಗಿರುವುದು ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಹಾಗೂ ಪ್ರವಾಸಿಗರಿಗೆ ತೀವ್ರ ಅಸೌಕರ್ಯ ಉಂಟುಮಾಡುತ್ತಿದೆ ಎಂದು ತಿಳಿಸಲಾಗಿದೆ.
ಕುಡುಕರು ಸಾರ್ವಜನಿಕ ಸ್ಥಳಗಳಲ್ಲೇ ಮದ್ಯಪಾನ ಮಾಡಿ ಗಲಾಟೆ ನಡೆಸುವುದು, ಅಲ್ಲಿಯೇ ಮಲಗುವುದು ಮುಂತಾದ ಘಟನೆಗಳು ನಗರದ ಗೌರವಕ್ಕೆ ಧಕ್ಕೆಯಾಗುವಂತಿದ್ದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲೂ ಅಸಹ್ಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಇದೇ ವೇಳೆ, ನಿರ್ಗತಿಕರು ಪರ್ಯಾಯ ಆಶ್ರಯದ ಕೊರತೆಯಿಂದ ಸಾರ್ವಜನಿಕ ಸ್ಥಳಗಳನ್ನೇ ಆಶ್ರಯವಾಗಿಸಿಕೊಂಡಿರುವುದರಿಂದ, ಅವರಿಗೆ ಮಾನವೀಯ ನೆಲೆಯಲ್ಲಿ ತಕ್ಷಣ ಸೂಕ್ತ ಆಶ್ರಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ದಂಡ ವಿಧಿಸಿ ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ.
ನಗರಸಭೆಯಿಂದ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ನಮ್ಮ ಕರ್ನಾಟಕ ಸೇನೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಹೋರಾಟ ರೂಪಿಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಜಿಲ್ಲಾಾಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷ ಲಕ್ಷ್ಮೀಶ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಿದ್ದಣ್ಣ ಎಸ್. ಪೂಜಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಬಿ.ವಿ., ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್, ಜಿಲ್ಲಾ ಸದಸ್ಯರಾದ ಅಶೋಕ್, ಸಂತೋಷ್ ಹನುಮಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

