ಉಳ್ಳಾಲ, ಜೂನ್ 28: 114 ವರ್ಷಗಳ ಸೇವಾ ಪರಂಪರೆಯನ್ನು ಹೊಂದಿರುವ ಎಂಸಿಸಿ ಬ್ಯಾಂಕ್ ತನ್ನ 22ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಆರಂಭಿಸುವ ಮೂಲಕ ಕರಾವಳಿ ಭಾಗದ ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ. ಫಾದರ್ ಮುಲ್ಲರ್ಸ್ ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿ ಭಾನುವಾರ ನೂತನ ಶಾಖೆ, ಎಟಿಎಂ ಹಾಗೂ ಭದ್ರತಾ ಕೊಠಡಿಯನ್ನು ಉದ್ಘಾಟಿಸುವುದರೊಂದಿಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಗೂ ಚಾಲನೆ ನೀಡಲಾಯಿತು.
ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಅರ್ಸುಲೈನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್ನ ಸುಪೀರಿಯರ್ ಜನರಲ್ ಸಿ. ಮಿಲ್ಲಿ ಫೆರ್ನಾಂಡಿಸ್, ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಉಳಿತಾಯದ ಸಂಸ್ಕೃತಿ ಬೆಳೆಸುವುದು, ಹಿರಿಯ ನಾಗರಿಕರಿಗೆ ಪಿಂಚಣಿ ಸೇವೆಗಳನ್ನು ಸುಲಭಗೊಳಿಸುವುದು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಾಲ ಮತ್ತು ಉಳಿತಾಯ ಯೋಜನೆಗಳ ಮೂಲಕ ಬೆಂಬಲ ನೀಡುವುದು ಬ್ಯಾಂಕ್ಗಳ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಎಟಿಎಂ ಕೇಂದ್ರವನ್ನು ಉದ್ಘಾಟಿಸಿದ ಫಾದರ್ ಮುಲ್ಲರ್ ಹೋಮಿಯೊಪತಿಕ್ ಕಾಲೇಜಿನ ಆಡಳಿತದಾರ ಫಾ. ನೀಲೆಶ್ ಕ್ರಾಸ್ತಾ, ಫಾದರ್ ಮುಲ್ಲರ್ಸ್ ಸಂಸ್ಥೆ ಮತ್ತು ಎಂಸಿಸಿ ಬ್ಯಾಂಕ್ ಎರಡೂ ಸೇವೆ, ವಿಶ್ವಾಸ ಹಾಗೂ ಮಾನವೀಯತೆಯ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದರು. ಆರ್ಥಿಕ ಭದ್ರತೆ ಕುಟುಂಬದ ನೆಮ್ಮದಿ ಮತ್ತು ಸಮಾಜದ ಅಭಿವೃದ್ಧಿಗೆ ಭದ್ರ ಅಡಿಪಾಯವಾಗಿದ್ದು, ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳು ಅದರ ಪ್ರಮುಖ ಅಂಗವಾಗಿವೆ ಎಂದು ಹೇಳಿದರು.
ಪಾನೀರ್ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್ನ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ ಮಾತನಾಡಿ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಎಂಸಿಸಿ ಬ್ಯಾಂಕ್ ಜನರ ನಂಬಿಕೆ ಗಳಿಸಿದೆ ಎಂದು ಶ್ಲಾಘಿಸಿದರು. ಗ್ರಾಹಕರನ್ನು ಅವರ ಉಡುಗೆ ಅಥವಾ ಬಾಹ್ಯ ರೂಪದಿಂದಲ್ಲ, ಸಮಾನ ಗೌರವದಿಂದ ಕಾಣುವ ಮನೋಭಾವವನ್ನು ಸಿಬ್ಬಂದಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿ, ಹೊಸ ಶಾಖೆ ಯಶಸ್ವಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಮುಂದಿನ ಆರು ತಿಂಗಳೊಳಗೆ ದೇರಳಕಟ್ಟೆ ಶಾಖೆಯಲ್ಲಿ ₹10 ಕೋಟಿ ವ್ಯವಹಾರ ಸಾಧಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು. 2018ರಲ್ಲಿ ₹500 ಕೋಟಿ ವ್ಯವಹಾರ ಹೊಂದಿದ್ದ ಬ್ಯಾಂಕ್ ಇಂದು ₹1,530 ಕೋಟಿ ವ್ಯವಹಾರಕ್ಕೆ ಬೆಳೆದಿರುವುದು ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿಯ ಸಮರ್ಪಣೆಯ ಫಲವಾಗಿದೆ ಎಂದರು. ಸಹಕಾರ ಬ್ಯಾಂಕ್ ಆಗಿದ್ದರೂ ರಾಷ್ಟ್ರೀಯ ಬ್ಯಾಂಕ್ಗಳ ಮಟ್ಟದ ಆಧುನಿಕ ಸೇವೆಗಳನ್ನು ಒದಗಿಸುತ್ತಿದ್ದು, ರಾಜ್ಯಾದ್ಯಂತ ಸೇವೆಯನ್ನು ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದು ಹೇಳಿದರು.
ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಎಸ್. ಶೆಟ್ಟಿ ಮಾತನಾಡಿ, ಎಂಸಿಸಿ ಬ್ಯಾಂಕ್ ಕೇವಲ ಬ್ಯಾಂಕಿಂಗ್ ಸೇವೆಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದು ಪ್ರಶಂಸಿಸಿದರು. ಸಮಾಜ ಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯವಾಗಿದ್ದು, ಹೊಸ ಶಾಖೆಯಿಂದ ದೇರಳಕಟ್ಟೆ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಸುಲಭವಾಗಿ ಲಭ್ಯವಾಗಲಿವೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯೊಬ್ಬರಿಗೆ ಸೇರಿದಂತೆ ವಿವಿಧ ಸಾಮಾಜಿಕ ಸಂಸ್ಥೆಗಳಿಗೆ ಒಟ್ಟು ₹5 ಲಕ್ಷ ಸಹಾಯಧನ ವಿತರಿಸಲಾಯಿತು. ದೇರಳಕಟ್ಟೆ–ಪಾನೀರು ಭಾಗದಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಹಲವು ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವು ಬ್ಯಾಂಕ್ನ ಸಾಮಾಜಿಕ ಬದ್ಧತೆ ಹಾಗೂ ಜನಸೇವೆಯ ಧ್ಯೇಯವನ್ನು ಮತ್ತೊಮ್ಮೆ ಅನಾವರಣಗೊಳಿಸಿತು.

