ತುಮಕೂರು: ಜಾತ್ರೆಯಲ್ಲಿ ಪರಿಚಯವಾಗಿ ಸ್ನೇಹ, ಬಳಿಕ ಪ್ರೀತಿಗೆ ತಿರುಗಿದ್ದ ಯುವತಿಯೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಯುವಕನನ್ನು ಪ್ರೇಯಸಿಯ ಹೆಸರಿನಲ್ಲಿ ಕರೆಸಿ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪ ತುಮಕೂರು ಜಿಲ್ಲೆಯ ಕುಣಿಗಲ್ ಭಾಗದಲ್ಲಿ ಕೇಳಿಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಲ್ಲೆಗೊಳಗಾದ ಯುವಕನನ್ನು ಗುಬ್ಬಿ ಪಟ್ಟಣದ ಹೊಸ ಕಾಲೋನಿ ನಿವಾಸಿ ಮೋಹಿತ್ (20) ಎಂದು ಗುರುತಿಸಲಾಗಿದೆ. ಆತ ಗುಬ್ಬಿ ಪಟ್ಟಣ ಪಂಚಾಯ್ತಿಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಸುಮಾರು ಎರಡು ತಿಂಗಳ ಹಿಂದೆ ನಡೆದ ಜಾತ್ರೆಯೊಂದರಲ್ಲಿ ಮೋಹಿತ್ಗೆ ಕುಣಿಗಲ್ ಮೂಲದ ಯುವತಿಯೊಂದಿಗೆ ಪರಿಚಯವಾಗಿತ್ತು. ಪರಿಚಯ ಕ್ರಮೇಣ ಸ್ನೇಹಕ್ಕೆ, ಬಳಿಕ ಪ್ರೀತಿಗೆ ತಿರುಗಿದ್ದು, ಇಬ್ಬರೂ ಇನ್ಸ್ಟಾಗ್ರಾಂ ಮೂಲಕ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಈ ಸಂಬಂಧದ ವಿಚಾರ ಯುವತಿಯ ಮನೆಯವರಿಗೆ ತಿಳಿದ ಬಳಿಕ, ಯುವತಿಯ ಮೊಬೈಲ್ನಿಂದಲೇ ಮೋಹಿತ್ಗೆ ಸಂದೇಶ ಕಳುಹಿಸಿ ಕುಣಿಗಲ್ಗೆ ಬರುವಂತೆ ಸೂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಂದೇಶವನ್ನು ಪ್ರೇಯಸಿಯೇ ಕಳುಹಿಸಿದ್ದಾಳೆ ಎಂದು ನಂಬಿದ ಮೋಹಿತ್ ಯಾವುದೇ ಅನುಮಾನವಿಲ್ಲದೆ ಕುಣಿಗಲ್ಗೆ ತೆರಳಿದ್ದಾನೆ.
ಅಲ್ಲಿಗೆ ತಲುಪಿದ ಬಳಿಕ ಆತನನ್ನು ತೋಟದ ಮನೆವೊಂದಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಯುವತಿಯ ಪೋಷಕರು ಸೇರಿದಂತೆ ಕೆಲವರು ದೊಣ್ಣೆ ಹಾಗೂ ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಯ ವೇಳೆ ಮೋಹಿತ್ನ ಕೈ, ಕಾಲು ಹಾಗೂ ಸೊಂಟದ ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಆರೋಪಿಗಳ ಗುಂಪು ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿದ್ದು, ಘಟನೆಯ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗಾಯಗಳಿಂದ ಬಳಲುತ್ತಿದ್ದ ಮೋಹಿತ್ ಬಳಿಕ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬೈಕ್ ಮೂಲಕ ಗುಬ್ಬಿಗೆ ವಾಪಸಾಗಿದ್ದಾನೆ. ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ.
ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಪ್ರೀತಿಯ ವಿಚಾರವನ್ನು ನೆಪವಾಗಿಸಿಕೊಂಡು ಯುವಕನನ್ನು ಬಲೆಗೆ ಬೀಳಿಸಿ ಹಲ್ಲೆ ನಡೆಸಿರುವ ಆರೋಪ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.







