ಬೆಂಗಳೂರು, ಜೂನ್ 10: ರಾಜ್ಯಸಭಾ ಟಿಕೆಟ್ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೆಗೌಡರವರು ಸ್ಪಷ್ಟನೆ ನೀಡಿದ್ದು, ರಾಜ್ಯಸಭಾ ಸದಸ್ಯನಾಗಬೇಕೆಂಬ ಯಾವುದೇ ವ್ಯಾಮೋಹ ಅಥವಾ ಹಂಬಲ ತಮ್ಮಲ್ಲಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ಏಳು ದಶಕಗಳ ಸುದೀರ್ಘ ರಾಜಕೀಯ ಪಯಣವನ್ನು ಸ್ಮರಿಸಿ, “1954-55ರಿಂದಲೇ ನಾನು ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದೇನೆ. ಗುತ್ತಿಗೆ ಕೆಲಸದ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ರಾಜಕೀಯ ಜೀವನ ಆರಂಭಿಸಿದ್ದೆ. ಅಂದಿನಿಂದ ಇಂದಿನವರೆಗೆ ಜನರ ನಡುವೆ ಕೆಲಸ ಮಾಡುತ್ತಾ ಬಂದಿದ್ದೇನೆ. ಹೀಗಿರುವಾಗ ಇಂದು ಯಾವುದೇ ಹುದ್ದೆ ಅಥವಾ ಸ್ಥಾನಕ್ಕಾಗಿ ಹಾತೊರೆಯುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

ರಾಜ್ಯಸಭಾ ಟಿಕೆಟ್ ಕೈತಪ್ಪಿರುವುದು ತಮ್ಮಗೆ ಅಪಮಾನವಾಗಿದೆ ಎಂಬ ಬೆಂಬಲಿಗರ ಅಭಿಪ್ರಾಯಗಳ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, “ನನ್ನ ಸ್ನೇಹಿತರು ಮತ್ತು ಹಿತೈಷಿಗಳು ಕಾಳಜಿಯಿಂದ ಮಾತನಾಡುತ್ತಿದ್ದಾರೆ. ಆದರೆ ನನ್ನ ಹೆಸರು ಪರಿಗಣನೆಯಲ್ಲಿದೆ ಎಂಬುದು ಮಾಧ್ಯಮಗಳ ವರದಿಗಳಲ್ಲಷ್ಟೇ ಕೇಳಿಬಂದಿದ್ದು, ನಾನು ವೈಯಕ್ತಿಕವಾಗಿ ಯಾವುದೇ ಬೇಡಿಕೆಯನ್ನು ಇಟ್ಟಿರಲಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಕಳೆದ ತಿಂಗಳು ಪ್ರಧಾನಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ದೆಹಲಿಗೆ ತೆರಳಿದ್ದ ಸಂದರ್ಭವನ್ನು ಉಲ್ಲೇಖಿಸಿದ ಅವರು, “ನನಗೆ ರಾಜ್ಯಸಭಾ ಸ್ಥಾನ ಬೇಕೆಂಬ ಆಸೆ ಇದ್ದಿದ್ದರೆ ಆ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಬಹುದಿತ್ತು. ಆದರೆ ನಾನು ಕಾರ್ಯಕ್ರಮ ಮುಗಿಸಿ ನೇರವಾಗಿ ಬೆಂಗಳೂರಿಗೆ ಮರಳಿದ್ದೆ” ಎಂದರು.
ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸಂಬಂಧದ ಕುರಿತು ಮಾತನಾಡಿದ ದೇವೇಗೌಡರು, “ಹಿಂದೆ ಗುಜರಾತ್ ಗಲಭೆ ಸಂದರ್ಭ ಮೋದಿ ಅವರ ವಿರುದ್ಧ ನಾನು ಕಠಿಣವಾಗಿ ಮಾತನಾಡಿದ್ದೆ. ಆದರೆ ಅವರು ಪ್ರಧಾನಿಯಾದ ನಂತರ ಹಲವು ಬಾರಿ ಭೇಟಿಯಾಗಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಅವರ ಆಡಳಿತದ ಬಗ್ಗೆ ಒಳ್ಳೆಯದು ಕಂಡಾಗ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ; ತಪ್ಪು ಕಂಡಾಗ ನೇರವಾಗಿ ಹೇಳಿದ್ದೇನೆ. ಇಂದು ವಿಶ್ವದಾದ್ಯಂತ ಮೋದಿ ಅವರಿಗೆ ಗೌರವವಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು” ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್–ಬಿಜೆಪಿ ಮೈತ್ರಿ ಕುರಿತು ಮಾತನಾಡಿದ ಅವರು, “ನಮ್ಮ ಮತ್ತು ಬಿಜೆಪಿ ನಡುವಿನ ಸಂಬಂಧ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಈ ಮೈತ್ರಿ ಮುಂದುವರಿಯಲಿದೆ. ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಮುಂದೆಯೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ತಮ್ಮ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ. ವೈಯಕ್ತಿಕ ಹಾಗೂ ಪಕ್ಷದ ಮಟ್ಟದಲ್ಲಿ ಬಿಜೆಪಿ ಜೊತೆಗೆ ನಮ್ಮ ಸಂಬಂಧ ಮುಂದುವರಿಯಲಿದೆ” ಎಂದು ತಿಳಿಸಿದರು.
ರಾಜಕೀಯ ಹುದ್ದೆಗಳಿಗಿಂತ ಜನಸೇವೆ ಮತ್ತು ರಾಜ್ಯದ ಅಭಿವೃದ್ಧಿಯೇ ತಮ್ಮ ಆದ್ಯತೆ ಎಂಬ ಸಂದೇಶವನ್ನು ಈ ಮೂಲಕ ದೇವೇಗೌಡರು ಪುನರುಚ್ಚರಿಸಿದರು.






