ಮಂಗಳೂರು, ಮೇ 27 : ದಕ್ಷಣ ಭಾರತದ ಪ್ರಾಚೀನ ಹೆಮ್ಮೆಯಾದ ತುಳು ಭಾಷೆಗೆ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಅಖಿಲ ಭಾರತ ತುಳು ಒಕ್ಕೂಟ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಗ್ರ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದ್ದಾರೆ.
ಮಂಗಳೂರಿನ ಕಾವೂರಿನ ಗಾಂಧಿನಗರದಲ್ಲಿರುವ ಮುಗ್ರೋಡಿ ಎನ್ಕ್ಲೇವ್ ಕಚೇರಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ತುಳು ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಳು ಭಾಷೆ, ತುಳು ಲಿಪಿ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ವಿವಿಧ ಇಲಾಖೆಗೆ ಅಗತ್ಯ ದಾಖಲೆಗಳು ಹಾಗೂ ಪೂರಕ ಮಾಹಿತಿಗಳನ್ನು ಸಲ್ಲಿಸಲಾಗಿದೆ. ಆದಾಗ್ಯೂ ತುಳು ಭಾಷೆಗೆ ಮಾನ್ಯತೆ ನೀಡುವ ಪ್ರಕ್ರಿಯೆಯಲ್ಲಿ ಇನ್ನೂ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ ಎಂಬುದಾಗಿ ವಿಷಾದ ವ್ಯಕ್ತಪಡಿಸಿದರು.
ತುಳು ಭಾಷೆಗೆ ಅಧಿಕ್ರತ ಭಾಷಾ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಹಲವು ದಶಕಗಳಿಂದ ಮುಂದುವರಿದಿದ್ದು, ಈ ಕುರಿತು ದೇಶದ ವಿವಿಧ ರಾಜ್ಯಗಳಲ್ಲಿ ಭಾಷಾ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ಕ್ರಮಗಳು ಮತ್ತು ಸರ್ಕಾರಗಳು ನೀಡಿರುವ ಮಾನ್ಯತೆಗಳ ಮಾಹಿತಿಯನ್ನು ಕೂಡ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಅಖಿಲ ಭಾರತ ತುಳು ಒಕ್ಕೂಟದ ಮಹತ್ವಾಕಾಂಕ್ಷಿ ಯೋಜನೆಯಾದ “ತುಳು ಗ್ರಾಮ” ನಿರ್ಮಾಣಕ್ಕಾಗಿ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ಸರ್ಕಾರ ಒಂದು ಎಕರೆಗೂ ಅಧಿಕ ಜಾಗವನ್ನು ಕಾಯ್ದಿರಿಸಿರುವುದಾಗಿ ತಿಳಿಸಿದ ಅವರು, ಶೀಘ್ರದಲ್ಲೇ ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಕಾರ್ಯಾರಂಭ ಮಾಡಲಾಗುವುದು ಎಂದರು.
ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು, ಸಾಂಸ್ಕೃತಿಕ ಸಮಾರಂಭಗಳು, ಪ್ರತಿಭಾ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ 2027-29ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಕೂಡ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಖಿಲ ಭಾರತ ತುಳು ಒಕ್ಕೂಟ್ಟದ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸದಸ್ಯರಾದ ಹೇಮಾ ದಾಮೋದರ್ ನಿಸರ್ಗ, ಸುಖಲಕ್ಷ್ಮೀ ಸುವರ್ಣ, ಜಯಂತಿ ಬಂಗೇರ, ಗೌರವ ಸಲಹೆಗಾರ ಚಂದ್ರಶೇಖರ ಸುವರ್ಣ ಹಾಗೂ ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಎ. ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಜಂಟಿ ಕಾರ್ಯದರ್ಶಿ ಗಣೇಶ್ ಮಲ್ಲಿ ಮರಕಡ ವಂದಿಸಿದರು.






