ಮಂಗಳೂರು : ಇತ್ತೀಚಿನ ದಿನಗಳಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಮಾದಕ ದ್ರವ್ಯ ಜಾಲದ ಚಟುವಟಿಕೆಗಳು ಸಮಾಜದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿವೆ. ವಿಶೇಷವಾಗಿ ವಿದ್ಯಾರ್ಥಿನಿಯರನ್ನೇ ಡ್ರಗ್ಸ್ ಮಾರಾಟ ಮತ್ತು ಸಾಗಣೆಂತಹ ಹೀನ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿರುವುದು ಅತ್ಯಂತ ಖಂಡನೀಯ ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಬೇಕಾದ ಯುವಜನತೆಯನ್ನು ಕೆಲ ದುಷ್ಕರ್ಮಿಗಳು ಹಣದ ಆಸೆಗೆ ಮಾದಕ ಜಾಲಕ್ಕೆ ಸೆಳೆದು ಅವರ ಬದುಕನ್ನು ನಾಶಮಾಡುತ್ತಿರುವುದು ಸಮಾಜದ ಭವಿಷ್ಯಕ್ಕೂ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಮನಸ್ಥಿತಿ, ಆರ್ಥಿಕ ಸಂಕಷ್ಟ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಮಾದಕ ವ್ಯಸನದ ದಾರಿಗೆ ತಳ್ಳುವ ಕೀಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಬೆದರಿಕೆ, ಆಮಿಷ ಹಾಗೂ ಮೋಸದ ಮೂಲಕ ಡ್ರಗ್ಸ್ ಮಾರಾಟದಂತಹ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿರುವ ಸಣ್ಣ ಮಟ್ಟದ ಆರೋಪಿಗಳನ್ನು ಬಂಧಿಸುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ಇದರ ಹಿಂದೆ ಕಾರ್ಯನಿರ್ವಹಿಸುತ್ತಿರುವ ನಿಜವಾದ ಕಿಂಗ್ಪಿನ್ಗಳು, ಹಣಕಾಸು ಪೂರೈಕೆದಾರರು ಹಾಗೂ ಸಂಘಟಿತ ಜಾಲವನ್ನು ಪತ್ತೆಹಚ್ಚಿ ಬೇರು ಸಮೇತ ಕಿತ್ತುಹಾಕುವ ಕಾರ್ಯ ನಡೆಯಬೇಕು. ರಾಜ್ಯದಾದ್ಯಂತ ಹರಡಿರುವ ಇಂತಹ ಜಾಲವನ್ನು ಸಂಪೂರ್ಣವಾಗಿ ನಾಶಪಡಿಸಲು ಪೊಲೀಸ್ ಇಲಾಖೆ, ಮಾದಕ ದ್ರವ್ಯ ನಿಯಂತ್ರಣ ವಿಭಾಗ ಹಾಗೂ ಇತರ ತನಿಖಾ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಕಟ್ಟುನಿಟ್ಟಿನ ನಿಗಾ ವಹಿಸುವುದು, ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಪೋಷಕರಿಗೂ ಅಗತ್ಯ ಮಾರ್ಗದರ್ಶನ ನೀಡುವುದು ಇಂದಿನ ಅಗತ್ಯವಾಗಿದೆ. ಯುವಜನರ ಬದುಕನ್ನು ಕತ್ತಲೆಗೆ ತಳ್ಳುತ್ತಿರುವ ಮಾದಕ ಜಾಲದ ವಿರುದ್ಧ ಸಮಾಜವೇ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಯೋಗಿಶ್ ಶೆಟ್ಟಿ ಜಪ್ಪು ಕರೆ ನೀಡಿದ್ದಾರೆ.
“ವಿದ್ಯಾರ್ಥಿಗಳು ದೇಶದ ಭವಿಷ್ಯ. ಅವರ ಬದುಕಿನೊಂದಿಗೆ ಆಟವಾಡುವ ಸಮಾಜಘಾತುಕ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಇಂತಹ ದುಷ್ಕರ್ಮಿಗಳನ್ನು ಜೈಲಿಗಟ್ಟುವುದರ ಜೊತೆಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
