ಕಾಪು: ಸುಮಾರು 18 ವರ್ಷಗಳ ಕಾಲ ಶಿರೂರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡ ವೈದ್ಯಾಧಿಕಾರಿ ಡಾ. ಪ್ರಭಾ ಎನ್. ಅವರಿಗೆ ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಹಾಗೂ ಬೈರಂಪಳ್ಳಿ ಘಟಕದ ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮವು ಸಂಘಟನೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ, “ಡಾ. ಪ್ರಭಾ ಎನ್. ಅವರು ಕಳೆದ 18 ವರ್ಷಗಳಿಂದ ಬೆಳ್ಳರಪಾಡಿ, 41ನೇ ಶಿರೂರು ಹಾಗೂ ಬೈರಂಪಳ್ಳಿ ಭಾಗದ ಜನರಿಗೆ ಆಯುರ್ವೇದ ಚಿಕಿತ್ಸೆಯ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಕೊರೋನಾ ಮಹಾಮಾರಿ ಸಂದರ್ಭದಲ್ಲೂ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಆರೋಗ್ಯ ಜಾಗೃತಿ ಮೂಡಿಸಿ ಅಪಾರ ವಿಶ್ವಾಸ ಗಳಿಸಿದ್ದಾರೆ” ಎಂದು ಶ್ಲಾಘಿಸಿದರು.
ಅವರು ಮುಂದುವರಿದು, “ಇತ್ತೀಚಿನ ದಿನಗಳಲ್ಲಿ ಅಲೋಪತಿ ಚಿಕಿತ್ಸೆಯತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿರುವ ಸಂದರ್ಭದಲ್ಲೂ ಆಯುರ್ವೇದದ ಮಹತ್ವ, ಔಷಧಿಗಳ ಉಪಯೋಗ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ಡಾ. ಪ್ರಭಾ ಪ್ರಮುಖ ಪಾತ್ರ ವಹಿಸಿದ್ದಾರೆ. ರೋಗಿಗಳೊಂದಿಗೆ ಆತ್ಮೀಯತೆಯಿಂದ ವರ್ತಿಸಿ, ಅವರ ವಿಶ್ವಾಸ ಗೆದ್ದಿದ್ದಾರೆ” ಎಂದರು.
ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿಯವರಾದ ಡಾ. ಪ್ರಭಾ ಎನ್., ತುಳುನಾಡಿನ ಭಾಷೆ ತುಳುವನ್ನು ಕಲಿತು, ಚಿಕಿತ್ಸೆಗಾಗಿ ಬರುವವರೊಂದಿಗೆ ತುಳು ಭಾಷೆಯಲ್ಲಿಯೂ ಸಂವಾದ ನಡೆಸುತ್ತಿದ್ದದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದು ಹೇಳಿದರು.
41ನೇ ಶಿರೂರಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಹಲವು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದ ಸಮಸ್ಯೆ ಇತ್ತು. ಈ ಬಗ್ಗೆ ನಿರಂತರ ಹೋರಾಟ ನಡೆಸಿ, ಇದೀಗ ಹೊಸ ಕಟ್ಟಡ ನಿರ್ಮಾಣದ ಪ್ರಕ್ರಿಯೆಗೆ ಡಾ. ಪ್ರಭಾ ಅವರ ಸಹಕಾರವೂ ಮಹತ್ವದಾಗಿದೆ ಎಂದು ಫ್ರ್ಯಾಂಕಿ ಡಿಸೋಜ ತಿಳಿಸಿದರು.
ಇದೇ ವೇಳೆ, ಶಿರೂರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ನೂತನವಾಗಿ ನಿಯೋಜನೆಗೊಂಡಿರುವ ಡಾ. ನಳಿನಿ ಅವರನ್ನು ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬೈರಂಪಳ್ಳಿ ಘಟಕದ ಉಪಾಧ್ಯಕ್ಷ ಗುಣಕರ್, ಆದರ್ಶ್ ಪೂಜಾರಿ, ಸುದರ್ಶನ್ ಸೇರಿಗಾರ್, ರಮೇಶ್ ಪೂಜಾರಿ, ನಾಗೇಶ್ ಬೇಟೆಡ್ಕ, ನವನೀತ್, ಸುಕೇಶ್, ದೀಕ್ಷಿತ್, ಗಣೇಶ್ ಹಾಗೂ ಅಜಯ್ ಉಪಸ್ಥಿತರಿದ್ದರು.

