ಮಂಗಳೂರು, ಜುಲೈ 9: ಸುರತ್ಕಲ್ನ ಕೃಷ್ಣಾಪುರದಲ್ಲಿ ಉಸ್ತಾದರೊಬ್ಬರ ಮೇಲೆ ನಡೆದಿರುವ ಹಲ್ಲೆ ಘಟನೆ ಅತ್ಯಂತ ಖಂಡನೀಯವಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೂ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಅಧ್ಯಕ್ಷರು, ಸುರತ್ಕಲ್ ಮದರಸಾ ಮ್ಯಾನೇಜ್ಮೆಂಟ್ ಹಾಗೂ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಲ್ ಮೂಲ್ಕಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧಾರ್ಮಿಕ ಶಿಕ್ಷಣದ ಮೂಲಕ ಸಮಾಜದಲ್ಲಿ ನೈತಿಕ ಮೌಲ್ಯಗಳು, ಶಿಸ್ತು ಹಾಗೂ ಸೌಹಾರ್ದತೆಯನ್ನು ಬೆಳೆಸುವ ಜವಾಬ್ದಾರಿಯನ್ನು ಹೊತ್ತಿರುವ ಉಸ್ತಾದರ ಮೇಲೆ ಹಲ್ಲೆ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ದುರ್ಘಟನೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಯಾವುದೇ ವ್ಯಕ್ತಿಯ ವಿರುದ್ಧ ಅಸಮಾಧಾನ, ಭಿನ್ನಾಭಿಪ್ರಾಯ ಅಥವಾ ಆರೋಪಗಳಿದ್ದರೂ ಅವುಗಳನ್ನು ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಬೇಕು. ಮಸೀದಿ ಆಡಳಿತ ಮಂಡಳಿ, ಮದರಸಾ ಸಮಿತಿ ಅಥವಾ ಪೊಲೀಸ್ ಇಲಾಖೆಯ ಮೂಲಕ ಸೂಕ್ತ ದೂರು ನೀಡಿ ನ್ಯಾಯ ಪಡೆಯುವ ಅವಕಾಶ ಇರುವಾಗ, ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಅವರು ಹೇಳಿದ್ದಾರೆ.
ಈ ರೀತಿಯ ಘಟನೆಗಳು ಸಮಾಜದಲ್ಲಿ ಅಶಾಂತಿ ಮತ್ತು ಆತಂಕಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡು, ಇಂತಹ ಕೃತ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸಂದೇಶ ನೀಡಬೇಕು ಎಂದು ಇಕ್ಬಲ್ ಮೂಲ್ಕಿ ಒತ್ತಾಯಿಸಿದ್ದಾರೆ.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನಿನ ಮೇಲಿನ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರೂ ಸಂಯಮದಿಂದ ವರ್ತಿಸಿ ಕಾನೂನಿನ ಮೇಲೆ ವಿಶ್ವಾಸವಿಟ್ಟು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
