Madikeri : ನಾಪೋಕ್ಲುವಿನಲ್ಲಿ ಪತ್ರಕರ್ತ ಝಕರಿಯ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಿದ್ದೀಕ್ (20), ರುಮಾನ್ (21) ಹಾಗೂ ನಾಫಿ (22) ಎಂದು ಗುರುತಿಸಲಾಗಿದೆ.
ಬಂಧಿತ ಸಿದ್ದೀಕ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಅವರ ಪುತ್ರನಾಗಿದ್ದು, ಪ್ರಕರಣದಲ್ಲಿ ಬಳಸಲಾಗಿದೆ ಎನ್ನಲಾದ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಪ್ರಮುಖ ಆರೋಪಿ ಮಹಮ್ಮದ್ ಅಲಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ಮತ್ತೊಂದು ಗೂಡ್ಸ್ ವಾಹನದ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ಸೋಮವಾರ ಸಂಜೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ನಡೆದಿತ್ತು. ತನಿಖೆ ಪ್ರಕಾರ, ಆರೋಪಿಗಳಲ್ಲಿ ಒಬ್ಬನಾದ ರುಮಾನ್ ಆಟೋ ಬಾಡಿಗೆ ಮಾಡುವ ನೆಪದಲ್ಲಿ ಪತ್ರಕರ್ತ ಝಕರಿಯ ಅವರನ್ನು ನಾಪೋಕ್ಲು ಪಟ್ಟಣದಿಂದ ಬಲಮುರಿ ಕಡೆಗೆ ಕರೆಸಿಕೊಂಡಿದ್ದ ಎನ್ನಲಾಗಿದೆ.
ಮಾರ್ಗಮಧ್ಯೆ ವೇನ್ಯೂ ಕಾರಿನಲ್ಲಿ ಬಂದಿದ್ದ ಆರೋಪಿಗಳು ಆಟೋಗೆ ಅಡ್ಡಗಟ್ಟಿ, ಝಕರಿಯ ಅವರ ಕಣ್ಣಿಗೆ ಕಾರದ ಪುಡಿ ಎರಚಿ ಅವರನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಬಾವಲಿ–ಚೆಯ್ಯಂಡಾಣೆ ಸಂಪರ್ಕ ರಸ್ತೆಯ ಕಾಫಿ ಮಿಲ್ ಸಮೀಪ ಸಿದ್ದೀಕ್, ಮಹಮ್ಮದ್ ಅಲಿ, ನಾಫಿ ಹಾಗೂ ರುಮಾನ್ ಸೇರಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಘಟನೆ ಬಳಿಕ ನಾಪೋಕ್ಲು ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
