ಮಂಗಳೂರು:
ನಗರದ ಕಾವೂರು ಸಮೀಪ ವಿದೇಶ ಉದ್ಯೋಗದ ಹೆಸರಿನಲ್ಲಿ ಹಣ ವಸೂಲಿಸಿ ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಪ್ರಕೃತಿ ಯು (34) ಹಾಗೂ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೂಲದ ಆಲ್ಡನ್ ರೆಬೇರೋ (42) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಕಾವೂರು ಠಾಣಾ ವ್ಯಾಪ್ತಿಯ ಹಲವರಿಗೆ “ವಿದೇಶದಲ್ಲಿ ಉತ್ತಮ ವೇತನದ ಉದ್ಯೋಗ ಕೊಡಿಸುತ್ತೇವೆ” ಎಂದು ನಂಬಿಸಿ, ಒಟ್ಟು ₹1 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ವಂಚನೆ ನಡೆಸಿದ್ದರು. ಅವರು ಜನರಿಂದ ಪಾಸ್ಪೋರ್ಟ್ಗಳನ್ನು ಕೂಡ ಸಂಗ್ರಹಿಸಿ ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕಾವೂರು ಪೊಲೀಸರು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ 24 ಪಾಸ್ಪೋರ್ಟ್ಗಳು, 43 ಗ್ರಾಂ ಚಿನ್ನ ಮತ್ತು 2 ಮೊಬೈಲ್ಫೋನ್ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ನಂತರ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಎಂ. ಬೈಂದೂರು, ಎಸ್ಐ ಮಲ್ಲಿಕಾರ್ಜುನ ಬಿರಾದಾರ, ಹಾಗೂ ಸಿಬ್ಬಂದಿಗಳಾದ ನಾಗರತ್ನ, ರಾಘವೇಂದ್ರ, ಪ್ರವೀಣ್ ಮತ್ತು ರಿಯಾಝ್ ಅವರು ಯಶಸ್ವಿಯಾಗಿ ನಡೆಸಿದ್ದಾರೆ.





