ಮಂಗಳೂರು, ಮೇ 29: ಮಾನವಕುಲವು ಪ್ರಕೃತಿಯೊಂದಿಗೆ ಹೆಚ್ಚಿನ ವಿನಯ, ಕರುಣೆ ಹಾಗೂ ಪೂಜ್ಯಭಾವನೆಯಿಂದ ಬದುಕಬೇಕು ಎಂದು ಆಧ್ಯಾತ್ಮಿಕ ನಾಯಕಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಕರೆ ನೀಡಿದರು.
ಮಂಗಳೂರಿನ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆಯುತ್ತಿರುವ ಬ್ರಹ್ಮಸ್ಥಾನ ಮಹೋತ್ಸವದ ಅಂಗವಾಗಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮನುಷ್ಯನು ಸಹಮಾನವರೊಂದಿಗೆ ಸಹಕಾರದಿಂದ, ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಹಾಗೂ ಈಶ್ವರನೊಂದಿಗೆ ಆಂತರಿಕ ಸಂಪರ್ಕವಿರಿಸಿಕೊಂಡು ಬದುಕುವುದನ್ನು ಕಲಿಯಬೇಕಾಗಿದೆ ಎಂದು ಹೇಳಿದರು.

ಇಂದಿನ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಕೋಪಗಳು ಮತ್ತು ಹವಾಮಾನ ವೈಪರೀತ್ಯಗಳು ಪ್ರಕೃತಿಯೊಂದಿಗಿನ ಮಾನವನ ಅಸಮತೋಲನದ ಬದುಕಿನ ಪರಿಣಾಮವಾಗಿದ್ದು, ಅವು ಮಾನವಕುಲಕ್ಕೆ ಎಚ್ಚರಿಕೆಯ ಸಂದೇಶಗಳಾಗಿವೆ ಎಂದು ಅಮ್ಮ ಅಭಿಪ್ರಾಯಪಟ್ಟರು.
“ಜನರು, ಸಮುದಾಯಗಳು ಹಾಗೂ ರಾಷ್ಟ್ರಗಳ ನಡುವಿನ ಸಂಘರ್ಷಗಳಲ್ಲಿ ರಾಜಿ ಮತ್ತು ಸಂಧಾನ ಸಾಧ್ಯವಾಗಬಹುದು. ಆದರೆ ಪ್ರಕೃತಿಯೊಂದಿಗೆ ಅದು ಸಾಧ್ಯವಿಲ್ಲ. ಪ್ರಕೃತಿಯನ್ನು ಸಮೀಪಿಸಲು ಇರುವ ಏಕೈಕ ಮಾರ್ಗವೆಂದರೆ ಅಹಂಕಾರವನ್ನು ತೊರೆದು, ತಲೆಬಾಗಿ, ವಿನಯ, ಸ್ನೇಹ ಮತ್ತು ಪೂಜ್ಯಭಾವನೆಯಿಂದ ಆಕೆಯನ್ನು ಆರಾಧಿಸುವುದಾಗಿದೆ” ಎಂದು ಅವರು ಹೇಳಿದರು.
ಮಾನವರು ಈ ಭೂಮಿ, ಅದರ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಸಮೃದ್ಧಿಯನ್ನು ತಮ್ಮದೇ ಸ್ವತ್ತು ಎಂದು ಪರಿಗಣಿಸದೇ, ಇತರ ಜೀವಜಾಲಗಳೊಂದಿಗೆ ಹಂಚಿಕೊಂಡು ಬದುಕಬೇಕಾಗಿದೆ. ಸಹಜೀವಿಗಳೊಂದಿಗೆ ಸಮಾನತೆಯ ಮನೋಭಾವದಿಂದ ಬದುಕುವ ಜಾಗೃತಿಯೇ ನಿಜವಾದ ಸಹಬಾಳ್ವೆಗೆ ಅಡಿಪಾಯವಾಗುತ್ತದೆ ಎಂದು ಅಮ್ಮ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಅಮ್ಮನವರ ಸೇವಾ ಚಟುವಟಿಕೆಗಳು ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೇ, ಶಿಕ್ಷಣ, ಆರೋಗ್ಯ, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಯತ್ತ ಮಹತ್ತರ ಕೊಡುಗೆ ನೀಡಿವೆ ಎಂದು ಶ್ಲಾಘಿಸಿದರು.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಆಧ್ಯಾತ್ಮಿಕ ಶಕ್ತಿಯು ಶಾಶ್ವತ ಮೌಲ್ಯ ಹೊಂದಿದ್ದು, ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ದಾರಿದೀಪವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಮಿ ಜಿತಕಾಮಾನಂದ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್, ಕಿಶೋರ್ ಆಳ್ವ, ಪ್ರಕಾಶ್ ಪೈ ಪೆರಾಜೆ, ವೇದಪ್ರಕಾಶ್ ಶ್ರೀಯಾನ್, ಗೌರವಾಧ್ಯಕ್ಷರಾದ ಡಾ. ಜೀವರಾಜ್ ಸೊರಕೆ, ಸಿ.ಎ. ವಾಮನ್ ಕಾಮತ್, ಶ್ರುತಿ ಹೆಗ್ಡೆ, ಡಾ. ವಸಂತಕುಮಾರ್ ಪೆರ್ಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.






