ಮಂಗಳೂರು: ಶತಮಾನೋತ್ಸವದ ಐತಿಹಾಸಿಕ ಸಂಭ್ರಮದತ್ತ ಸಾಗುತ್ತಿರುವ ತುಳುವ ಮಹಾಸಭೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಉದ್ದೇಶದಿಂದ ರೂಪುಗೊಂಡಿರುವ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಂಘಟನೆಯ ಮಂಗಳೂರು ವಲಯ ಸಮಿತಿ ರೂಪೀಕರಣ ಸಭೆ ಸೆಪ್ಟೆಂಬರ್ 3ರಂದು ಮಂಗಳೂರಿನಲ್ಲಿ ನಡೆಯಲಿದೆ.
ಎಸ್.ಯು. ಪಣಿಯಾಡಿಯವರ ಕಾರ್ಯದರ್ಶಿತ್ವದಲ್ಲಿ ಹಾಗೂ ಅಂಜಾರು ರಾಮಣ್ಣ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 1928ರಲ್ಲಿ ಉಡುಪಿಯಲ್ಲಿ ಆರಂಭಗೊಂಡ ತುಳುವ ಮಹಾಸಭೆ, 2028ರಲ್ಲಿ ತನ್ನ 100ನೇ ವರ್ಷದ ಶತಮಾನೋತ್ಸವವನ್ನು ಆಚರಿಸಲಿದೆ. ಈ ಐತಿಹಾಸಿಕ ಮೈಲಿಗಲ್ಲಿನ ಹಿನ್ನೆಲೆಯಲ್ಲಿ ತುಳು ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ತುಳುನಾಡಿನ ಸಾಮಾಜಿಕ-ಸಾಂಸ್ಕೃತಿಕ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅನ್ನು ವಿಸ್ತರಿಸಲಾಗುತ್ತಿದೆ.
ಇದರ ಭಾಗವಾಗಿ ಮಂಗಳೂರು ವಲಯದ ಸಮಿತಿಯನ್ನು ರಚಿಸುವ ಸಭೆಯನ್ನು ಸೆಪ್ಟೆಂಬರ್ 3ರಂದು ಸಂಜೆ 3.30ಕ್ಕೆ ಉರ್ವ ಸ್ಟೋರ್ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಮಂಗಳೂರು ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮಂಗಳೂರು ವಲಯದ ತುಳು ಬಂಧುಗಳು, ತುಳು ಭಾಷೆ ಹಾಗೂ ಸಂಸ್ಕೃತಿಯ ಅಭಿಮಾನಿಗಳು, ಯುವಜನತೆ, ಮಹಿಳೆಯರು ಮತ್ತು ಸಮಾಜಮುಖಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ವಲಯ ಸಮಿತಿ ರೂಪೀಕರಣಕ್ಕೆ ತಮ್ಮ ಅಮೂಲ್ಯ ಸಹಕಾರ ನೀಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ತುಳು ಭಾಷೆ–ಸಂಸ್ಕೃತಿಯ ಸಂರಕ್ಷಣೆ, ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗೆ ತುಳುವಿನ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಕಾರ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಸಂಘಟಿತ ಪ್ರಯತ್ನಗಳನ್ನು ರೂಪಿಸುವುದು ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಪ್ರಮುಖ ಆಶಯವಾಗಿದೆ ಎಂದು ತಿಳಿಸಲಾಗಿದೆ.
ತುಳುವರ್ಲ್ಡ್ ಫೌಂಡೇಶನ್ನ ಸಂಚಾಲಕ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಅವರು ಸಭೆಗೆ ತುಳು ಭಾಷಾಭಿಮಾನಿಗಳಿಗೆ ಆತ್ಮೀಯ ಆಹ್ವಾನ ನೀಡಿದ್ದಾರೆ.
“ನೂರು ವರ್ಷಗಳ ಪರಂಪರೆ – ಮುಂದಿನ ಶತಮಾನಕ್ಕೆ ಹೊಸ ಸಂಕಲ್ಪ” ಎಂಬ ಆಶಯದೊಂದಿಗೆ ನಡೆಯಲಿರುವ ಈ ಸಭೆ, ಮಂಗಳೂರು ವಲಯದಲ್ಲಿ ತುಳುಪರ ಸಂಘಟನಾ ಶಕ್ತಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಲಿದೆ.

