ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಗುರುವಾರ ಸಂಭವಿಸಿದ ತರಬೇತಿ ವಿಮಾನ ಅಪಘಾತದಲ್ಲಿ ಕರ್ನಾಟಕದ ಉಡುಪಿ ಮೂಲದ ಯುವ ತರಬೇತಿ ಪೈಲಟ್ ಸೇರಿದಂತೆ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಗಂಗಾ ನದಿ ತೀರದ ನತ್ತುಪುರವಾ ಗ್ರಾಮದ ಗಂಗಾ ಬ್ಯಾರೇಜ್ ಪ್ರದೇಶದಲ್ಲಿ ಈ ಡಬಲ್ ಎಂಜಿನ್ ವಿಮಾನ ಪತನಗೊಂಡಿದೆ. ಮೃತರನ್ನು ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದ ಕಡೇಬೆರ್ಕೆ ಮೂಲದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ.
ಅಭಿಷೇಕ್ ಪೂಜಾರಿ ಹಿನ್ನೆಲೆ:
ಕಳೆದ ಎರಡೂವರೆ ವರ್ಷಗಳಿಂದ ಕಾನ್ಪುರದಲ್ಲಿ ಖಾಸಗಿ ವಿಮಾನಯಾನ ತರಬೇತಿ ಕೇಂದ್ರದಲ್ಲಿ ಟ್ರೈನಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು.
ಇವರ ಪೋಷಕರಾದ ಪ್ರಭಾಕರ ಪೂಜಾರಿ ಹಾಗೂ ಶಶಿಕಲಾ ಪೂಜಾರಿ ಮುಂಬೈನಲ್ಲಿ ನೆಲೆಸಿದ್ದಾರೆ.
ಅಭಿಷೇಕ್ ಆಗಾಗ್ಗೆ ತಮ್ಮ ಕುಟುಂಬದೊಂದಿಗೆ ಹಿರಿಯಡ್ಕ ಕಣಜಾರುವಿನಲ್ಲಿರುವ ಮಾವ ಜೀವನ್ ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದರು.
ಘಟನೆಯ ವಿವರ:
ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಅವರ ಮಾಹಿತಿ ಪ್ರಕಾರ, ಆಗಸ್ಟ್ 27 ರಂದು ಬೆಳಿಗ್ಗೆ ಸುಮಾರು 11:30ಕ್ಕೆ ತರಬೇತಿ ಕೇಂದ್ರದಿಂದ ಹಾರಾಟ ಆರಂಭಿಸಿದ್ದ ವಿಮಾನ, ತರಬೇತಿ ಮುಗಿಸಿ ವಾಪಸಾಗುವ ವೇಳೆ ಕೇವಲ 20 ನಿಮಿಷಗಳಲ್ಲಿ ಪತನಗೊಂಡಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
ಮುಂದಿನ ಕ್ರಮ:
ವಿಮಾನ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಅಭಿಷೇಕ್ ಅವರ ಕುಟುಂಬದವರು ಮೃತದೇಹದ ಮುಂದಿನ ಕಾನೂನು ಪ್ರಕ್ರಿಯೆಗಳು ಹಾಗೂ ಅಂತ್ಯಸಂಸ್ಕಾರದ ಔಪಚಾರಿಕತೆಗಳಿಗಾಗಿ ಕಾನ್ಪುರಕ್ಕೆ ತೆರಳಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಅಗತ್ಯ ಕಾನೂನು ಕ್ರಮಗಳು ಹಾಗೂ ತನಿಖೆ ಮುಂದುವರಿದಿದೆ.

