ಉಡುಪಿ ತಾಲೂಕಿನ ಮಲ್ಪೆಯಲ್ಲಿ ಮೀನು ಕಳ್ಳತನದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿರುವಂತಹ ಅಮಾನವೀಯ ಘಟನೆ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಡಿಸಿ ಮತ್ತು ಎಸ್ಪಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಕೂಡಲೇ ಮೂವರು ಆರೊಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸಿ.ಎಂ ಸಿದ್ದರಾಮಯ್ಯ ತಮ್ಮ x ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದು
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ತಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು. ಕಾರಣವೇನೇ ಇರಲಿ ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು.ಇಂತಹ ಅನಾಗರೀಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಾದುದ್ದಲ್ಲ. ಕಳ್ಳತನ, ಮೋಸ, ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ನಮ್ಮಲ್ಲಿ ಪೊಲೀಸ್ ಇಲಾಖೆ, ಕಾನೂನು ವ್ಯವಸ್ಥೆ ಎಲ್ಲವೂ ಇದೆ, ದೂರು ದಾಖಲಿಸಿದರೆ ಪೊಲೀಸರು ತನಿಖೆ ನಡೆಸಿ, ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ.ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು. 32/25 ಕಲಂ.189(2),191(2),126(2),127(2),74,115(2),352,351(2),190 ಬಿಎನ್ಎಸ್ ಹಾಗೂ 3(1)(r),3(1)(s),3(2)(v-a)ಎಸ್ಸಿ ಮತ್ತು ಎಸ್ಟಿ ಕಾಯಿದೆ 1989ರಂತೆ ಈ ಪ್ರಕರಣದಲ್ಲಿ ಆರೋಪಿತರಾದ ಶ್ರೀಮತಿ ಲಕ್ಷ್ಮೀ, ಶಿಲ್ಪ ಮತ್ತು ಸುಂದರ್ ರವರನ್ನು ಬಂದಿಸಲಾಗಿದೆ ಹಾಗೂ ಇನ್ನೋರ್ವ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ವಿಡಿಯೋ ಹಾಗೂ ಇತರ ಸಾಕ್ಷಿಗಳನ್ನು ಪರಿಶೀಲಿಸಿ, ಮುಂದಿನ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ
