ಮಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟವನ್ನು ತಡೆಯುವ ಉದ್ದೇಶದಿಂದ ಸಿಸಿಬಿ (CCB) ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಎಂಡಿಎಂಎ (MDMA) ಮಾದಕ ವಸ್ತು ಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಂಪ್ವೆಲ್–ಎಕ್ಕೂರು ಪ್ರದೇಶದಲ್ಲಿ ಆಟೋ ರಿಕ್ಷಾ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದರು.
ಬಂಧಿತರನ್ನು ತೊಕ್ಕೊಟ್ಟು ಪೆರ್ಮನೂರು ನಿವಾಸಿ ಹೈದರ್ ಅಲಿ (53), ಚೆಂಬುಗುಡ್ಡೆ ನಿವಾಸಿ ಮೊಹಮ್ಮದ್ ಸಜಾದ್ (29) ಹಾಗೂ ಉಡುಪಿ ಜಿಲ್ಲೆಯ ಶಿರ್ವ ಮೂಲದ ಪ್ರಸ್ತುತ ಉಜ್ಜೋಡಿಯಲ್ಲಿ ವಾಸವಾಗಿರುವ ಜೈಸನ್ ಮೆನೆಜಸ್ (26) ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ಸುಮಾರು 26 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹2.50 ಲಕ್ಷ), ₹37,000 ನಗದು, 5 ಮೊಬೈಲ್ ಫೋನ್ಗಳು, ತೂಕಮಾಪನ ಯಂತ್ರ ಹಾಗೂ ಒಂದು ಆಟೋ ರಿಕ್ಷಾ ಸೇರಿದಂತೆ ಒಟ್ಟು ₹4,37,500 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ

