ಉಡುಪಿ, ಸೆ.25: ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಟ್ಟ್ ಬೆಲ್ತೂರು ನಿವಾಸಿ ರಾಘವೇಂದ್ರ ಜೋಗಿ (48) ಅವರು ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈ ಸಾವಿನ ಕುರಿತು ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಸೆ.24ರಂದು ಮಧ್ಯಾಹ್ನ ಸುಮಾರು 12.30ರ ವೇಳೆಗೆ ರಾಘವೇಂದ್ರ ಜೋಗಿ ಅವರು ಮನೆಯ ಸಮೀಪ ಮರಕ್ಕೆ ನೇಣು ಬಿಗಿದುಕೊಂಡಿರುವುದನ್ನು ಕುಟುಂಬಸ್ಥರು ಗಮನಿಸಿದ್ದು, ತಕ್ಷಣ ಸ್ಥಳೀಯರ ನೆರವಿನಿಂದ ಅವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮೃತರ ಸಹೋದರ ರಾಜೇಶ್ ಜೋಗಿ ಅವರು ನೀಡಿದ ದೂರಿನ ಆಧಾರದ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ಸಂಖ್ಯೆ 31/2026 ದಾಖಲಾಗಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194ರ ಅನ್ವಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಘವೇಂದ್ರ ಜೋಗಿ ಅವರು ಸುಮಾರು 18 ವರ್ಷಗಳ ಕಾಲ ಒಂದೇ ಸಹಕಾರಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅವರ ಅಕಾಲಿಕ ಸಾವಿನ ಹಿಂದಿರುವ ನಿಖರ ಕಾರಣಗಳನ್ನು ತನಿಖೆಯ ಮೂಲಕ ಬಹಿರಂಗಪಡಿಸುವ ಅಗತ್ಯವಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ತಿಳಿಸಿದೆ.
ಆತ್ಮಹತ್ಯೆ ಎಂದು ಪ್ರಾಥಮಿಕವಾಗಿ ಪ್ರಕರಣ ದಾಖಲಾಗಿದ್ದರೂ, ಸಾವಿಗೆ ಕಾರಣವಾದ ಪರಿಸ್ಥಿತಿಗಳು, ಇತ್ತೀಚಿನ ದಿನಗಳಲ್ಲಿನ ಅವರ ವೈಯಕ್ತಿಕ ಹಾಗೂ ವೃತ್ತಿಪರ ಪರಿಸ್ಥಿತಿ, ಯಾವುದೇ ಒತ್ತಡ ಅಥವಾ ವಿವಾದಗಳಿದ್ದವೆಯೇ, ಸಂಸ್ಥೆಗೆ ಸಂಬಂಧಿಸಿದ ಯಾವುದೇ ವಿಚಾರಗಳು ಸಾವಿನೊಂದಿಗೆ ಸಂಬಂಧ ಹೊಂದಿವೆಯೇ ಎಂಬುದನ್ನು ಪೊಲೀಸರು ಎಲ್ಲಾ ಆಯಾಮಗಳಿಂದ ಪರಿಶೀಲಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.
ಅದೇ ರೀತಿ, ಘಟನೆ ನಡೆದ ಸ್ಥಳದ ವೈಜ್ಞಾನಿಕ ಪರಿಶೀಲನೆ, ಲಭ್ಯವಿರುವ ಸಾಕ್ಷ್ಯಗಳ ಸಂಗ್ರಹ, ಮೊಬೈಲ್ ಫೋನ್ ಹಾಗೂ ಇತರ ಸಂಬಂಧಿತ ದಾಖಲೆಗಳ ಪರಿಶೀಲನೆ, ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಅಗತ್ಯವಿರುವ ಇತರ ವ್ಯಕ್ತಿಗಳ ಹೇಳಿಕೆ ದಾಖಲಿಸುವ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಮೃತರ ಕುಟುಂಬಕ್ಕೆ ಸತ್ಯ ಮತ್ತು ನ್ಯಾಯ ದೊರಕಬೇಕಾದರೆ ಯಾವುದೇ ಪೂರ್ವನಿರ್ಧಾರಿತ ನಿಲುವಿಲ್ಲದೆ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ತನಿಖೆ ನಡೆಸಬೇಕು. ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದಲ್ಲಿ ಅದರ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಮನವಿ ಮಾಡಿದೆ.
“ರಾಘವೇಂದ್ರ ಜೋಗಿ ಅವರ ಸಾವಿನ ನಿಜವಾದ ಕಾರಣ ಏನು ಎಂಬುದು ಕುಟುಂಬಸ್ಥರು ಹಾಗೂ ಸಾರ್ವಜನಿಕರಿಗೆ ಸ್ಪಷ್ಟವಾಗಬೇಕು. ಪ್ರಕರಣವನ್ನು ಕೇವಲ ಯುಡಿಆರ್ ಪ್ರಕರಣಕ್ಕೆ ಸೀಮಿತಗೊಳಿಸದೆ, ಎಲ್ಲಾ ಆಯಾಮಗಳಿಂದ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವುದು ತನಿಖಾ ಸಂಸ್ಥೆಗಳ ಜವಾಬ್ದಾರಿಯಾಗಿದೆ” ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ತಿಳಿಸಿದೆ.
ಈ ಪ್ರಕರಣದ ತನಿಖೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸಿ, ತನಿಖೆಯ ಪ್ರಗತಿ ಹಾಗೂ ಸತ್ಯಾಂಶವನ್ನು ಕುಟುಂಬಸ್ಥರಿಗೆ ಸ್ಪಷ್ಟಪಡಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.

