ಬ್ರಹ್ಮಾವರ, ಅ. 28: ಹಣಕಾಸಿನ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ರೌಡಿಶೀಟರ್ ಸುಜಿತ್ ಪಿಂಟೊ (43) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಪ್ರಮೋದ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಣದ ವಿಚಾರವೇ ಕೊಲೆಗೆ ಕಾರಣ?
ಮನೆಗೆ ಸಾಮಗ್ರಿಗಳನ್ನು ಪೂರೈಸುತ್ತಿದ್ದ ರಿಕ್ಷಾ ಚಾಲಕ ಪ್ರಮೋದ್ಗೆ ಸುಜಿತ್ ಪಿಂಟೊ ಹಣ ಪಾವತಿಸಬೇಕಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಮೋದ್, ಸುಜಿತ್ನನ್ನು ತಾನು ಇದ್ದ ಸ್ಥಳಕ್ಕೆ ಬರುವಂತೆ ಕರೆದಿದ್ದನು ಎಂದು ತಿಳಿದುಬಂದಿದೆ.

ಅದರಂತೆ ಅಲ್ಲಿಗೆ ತೆರಳಿದ ಸುಜಿತ್ ಮತ್ತು ಪ್ರಮೋದ್ ನಡುವೆ ಮದ್ಯದ ಅಮಲಿನಲ್ಲಿ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಅದು ಹೊಡೆದಾಟಕ್ಕೆ ತಿರುಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಪ್ರಮೋದ್, ಕಬ್ಬಿಣದ ರಾಡ್ನಿಂದ ಸುಜಿತ್ನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಸುಜಿತ್ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಜಿತ್
ಮೃತ ಸುಜಿತ್ ಪಿಂಟೊ ವಿರುದ್ಧ ಈ ಹಿಂದೆ ಹಲವು ಕೊಲೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ ಹಾಗೂ 2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲಿಯೂ ಸುಜಿತ್ ಆರೋಪಿಯಾಗಿದ್ದನು ಎಂದು ತಿಳಿದುಬಂದಿದೆ.
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಾದವೊಂದು ಕೊಲೆಯಲ್ಲಿ ಅಂತ್ಯಗೊಂಡಿರುವುದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಘಟನೆಯ ಇತರ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

