ಉಡುಪಿ, ಅ. 26: ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್ಗಳನ್ನು ಅನ್ಲೋಡ್ ಮಾಡುತ್ತಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಕಾಂಗ್ರೆಸ್ ಕಾರ್ಯಕರ್ತ, ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದ ರಿಕ್ಷಾ ಚಾಲಕ ಸುನಿಲ್ ಬೈಲಕೆರೆ (45) ಮೃತಪಟ್ಟಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಪರಿಸರದ ನಿವಾಸಿಯಾಗಿದ್ದ ಸುನಿಲ್ ಅವರು, ಹಿಂದಿನ ಶೀರೂರು ಮಠದ ಶ್ರೀಗಳಾಗಿದ್ದ ದಿವಂಗತ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಪ್ತರಾಗಿದ್ದರು. ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಹಲವು ವರ್ಷಗಳಿಂದ ಸ್ಥಳೀಯವಾಗಿ ಪರಿಚಿತರಾಗಿದ್ದರು.
ಉಡುಪಿ ನಗರದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ, ಫಲಾಪೇಕ್ಷೆಯಿಲ್ಲದೆ ನೆರವಿಗೆ ಧಾವಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಸುನಿಲ್ ಅವರ ಮಾನವೀಯ ಗುಣವನ್ನು ಸ್ಥಳೀಯರು ಸ್ಮರಿಸಿದ್ದಾರೆ.
ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್ಗಳನ್ನು ಇಳಿಸುವ ಸಂದರ್ಭದಲ್ಲಿ ಅವುಗಳಲ್ಲಿ ಒಂದು ಬ್ಲಾಕ್ ತಗುಲಿ ಗಂಭೀರವಾಗಿ ಗಾಯಗೊಂಡ ಸುನಿಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.

