ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಕರ್ನಾಟಕದ ಲಕ್ಷಾಂತರ ಜನರಿಗೆ ಸುಲಭ, ವೇಗವಾದ ಹಾಗೂ ಸಮೀಪದ ನ್ಯಾಯದಾನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಬಲವಾದ ಆಗ್ರಹ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಕರಾವಳಿ ಭಾಗದ ಜನರು ಸಣ್ಣ ಹಾಗೂ ಮಧ್ಯಮ ಮಟ್ಟದ ನ್ಯಾಯಾಂಗ ವಿಚಾರಗಳಿಗೂ ಬೆಂಗಳೂರಿನವರೆಗೆ ತೆರಳಬೇಕಾದ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ. ಇದರಿಂದ ಸಾಮಾನ್ಯ ನಾಗರಿಕರು, ಬಡವರು, ರೈತರು, ಮೀನುಗಾರರು, ಕಾರ್ಮಿಕರು ಮತ್ತು ಮಹಿಳೆಯರು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ನ್ಯಾಯದಾನ ಪ್ರಕ್ರಿಯೆ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಬೇಕಾದರೆ ಮಂಗಳೂರಿನಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಅನಿವಾರ್ಯ” ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ನೀಡಿರುವುದು ಕರಾವಳಿ ಭಾಗದ ಜನರಲ್ಲಿ ಹೊಸ ಆಶಾಭರವನ್ನೂ ಮೂಡಿಸಿದೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ದೀರ್ಘಕಾಲದಿಂದ ನಡೆಯುತ್ತಿರುವ ಜನಪರ ಹೋರಾಟಕ್ಕೆ ದೊರೆತ ಗೌರವವಾಗಿದೆ ಎಂದು ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಸಂದರ್ಭದಲ್ಲಿ ಮಂಗಳೂರಿನ ಬದಲಾಗಿ ಬೇರೆ ಜಿಲ್ಲೆಗಳಲ್ಲಿ ಸಂಚಾರಿ ಪೀಠ ಸ್ಥಾಪನೆ ಮಾಡುವಂತೆ ಕೇಳಿಬರುತ್ತಿರುವ ಬೇಡಿಕೆಗಳು ಕರಾವಳಿ ಜನರ ಹಕ್ಕಿನ ಪ್ರಶ್ನೆಯನ್ನು ಮಸುಕುಗೊಳಿಸುವ ಪ್ರಯತ್ನವಾಗಿದೆ. ನ್ಯಾಯಾಂಗ ಸೌಲಭ್ಯಗಳ ವಿಸ್ತರಣೆ ಹೆಸರಿನಲ್ಲಿ ಕರಾವಳಿ ಭಾಗದ ನ್ಯಾಯಸಮ್ಮತ ಹಕ್ಕನ್ನು ಕಡೆಗಣಿಸುವಂತಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಮಂಗಳೂರು ವಕೀಲರ ಸಂಘವು ಹಲವು ವರ್ಷಗಳಿಂದ ನಿರಂತರ, ಶಾಂತಿಯುತ ಹಾಗೂ ರಾಜಕೀಯಾತೀತ ಹೋರಾಟವನ್ನು ನಡೆಸುತ್ತಿದ್ದು, ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವಕೀಲರ ಸಂಘದ ಹೋರಾಟವು ಕೇವಲ ವೃತ್ತಿಪರ ಬೇಡಿಕೆಯಾಗಿರದೆ, ಕರಾವಳಿ ಭಾಗದ ಜನರ ನ್ಯಾಯದ ಹಕ್ಕಿಗಾಗಿ ನಡೆದ ಜನಾಂದೋಲನವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಈ ವಿಚಾರವಾಗಿ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು, ಹಿರಿಯ ಮುಖಂಡರು ಹಾಗೂ ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಜೊತೆಗೆ ವಿಧಾನಸಭಾ ಅಧಿವೇಶನದಲ್ಲಿಯೂ ಹಲವು ಬಾರಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ವಾಣಿಜ್ಯ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಾದೇಶಿಕ ಕೇಂದ್ರವಾಗಿ ಬೆಳೆಯುತ್ತಿರುವ ನಗರವಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ನ್ಯಾಯಾಂಗ ಸೇವೆಗಳನ್ನು ಸಮೀಪದಲ್ಲೇ ಒದಗಿಸಲು ಮಂಗಳೂರು ಅತ್ಯಂತ ಸೂಕ್ತ ಕೇಂದ್ರವಾಗಿದೆ ಎಂದು ಅವರು ಹೇಳಿದ್ದಾರೆ.
“ನ್ಯಾಯವು ಜನರ ಬಳಿಗೆ ತಲುಪಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ತತ್ವ. ಕರಾವಳಿ ಭಾಗದ ಜನರು ನ್ಯಾಯಕ್ಕಾಗಿ ನೂರಾರು ಕಿಲೋಮೀಟರ್ ದೂರ ಪ್ರಯಾಣಿಸಬೇಕಾದ ಪರಿಸ್ಥಿತಿ ಅಂತ್ಯಗೊಳ್ಳಬೇಕು. ಆದ್ದರಿಂದ ಸರ್ಕಾರ ಯಾವುದೇ ವಿಳಂಬ ಮಾಡದೆ ಮಂಗಳೂರಿನಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಕುರಿತು ಶೀಘ್ರ ಅಧಿಕೃತ ಘೋಷಣೆ ಮಾಡಬೇಕು” ಎಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.




