ಉಡುಪಿ ಜಿಲ್ಲೆಯ ಹೇರಾಡಿಯ ಶ್ರೀ ಆದಿಶೇಷನಾಗ ಸನ್ನಿಧಿಯ ವಾರ್ಷಿಕೋತ್ಸವದ ಅಂಗವಾಗಿ, ಬ್ರಹ್ಮಾವರ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಭಾನುವಾರ ಗೌರವ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯಲ್ಲಿ ನಡೆದಿದ್ದ ಸುಮಾರು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಚಾಕಚಕ್ಯತೆಯಿಂದ ಭೇದಿಸಿ, ಕಳ್ಳನನ್ನು ಮಾಲು ಸಮೇತ ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸ್ ತಂಡ ಯಶಸ್ವಿಯಾಗಿತ್ತು. ಈ ಕಾರ್ಯಾಚರಣೆ ಗ್ರಾಮಸ್ಥರಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ಪೊಲೀಸರ ತ್ವರಿತ ಕಾರ್ಯಾಚರಣೆ ಹಾಗೂ ಅಪರಾಧ ನಿಯಂತ್ರಣದ ಬದ್ಧತೆಯನ್ನು ಗುರುತಿಸಿ, ಹೇರಾಡಿ ಗ್ರಾಮಸ್ಥರು ತಮ್ಮ ಪ್ರೀತಿ ಮತ್ತು ವಿಶ್ವಾಸದ ಪ್ರತೀಕವಾಗಿ ಠಾಣಾಧಿಕಾರಿ ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಸನ್ನಿಧಿ ಟ್ರಸ್ಟ್ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ಪೊಲೀಸ್ ಇಲಾಖೆಯ ಸೇವೆಯನ್ನು ಪ್ರಶಂಸಿಸಿದರು.

