ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತು ಜಾಲವನ್ನು ಹೆಬ್ಬಾಳ ಪೊಲೀಸರು ಭೇದಿಸಿದ್ದು, ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು ₹35 ಕೋಟಿ ಮೌಲ್ಯದ 17.4 ಕೆ.ಜಿ. ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಸೆನೆಗಲ್ ಮೂಲದ ಡನ್ಫಾ ಗೆರಾಲ್ಡ್, ತಾಂಜೇನಿಯಾ ಮೂಲದ ಮೆಗ್ರಾತ್, ನೈಜೀರಿಯಾ ಮೂಲದ ಒಬಿಯಾನಿಜ್ ರೀಟಾ, ಹೊಸದಿಲ್ಲಿಯ ರೀನಾ ಯಾದವ್ ಹಾಗೂ ದೆಬಾಶಿಶ್ ಬ್ಯಾನರ್ಜಿ, ಜೊತೆಗೆ ಬೆಂಗಳೂರಿನ ಧೀರಜ್, ಮೊಹಮ್ಮದ್ ಮನ್ಸೂರ್ ಮತ್ತು ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದ್ದು, ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಸೀರೆ, ಇಸ್ತ್ರಿ ಟೇಬಲ್ ಮತ್ತು ಕುರ್ಚಿಗಳ ಒಳಭಾಗದಲ್ಲಿ ಎಂಡಿಎಂಎ ಕ್ರಿಸ್ಟಲ್ ಅಡಗಿಸಿ ಉಡುಗೊರೆ ಪ್ಯಾಕ್ ಮಾದರಿಯಲ್ಲಿ ಸಿದ್ಧಪಡಿಸುತ್ತಿದ್ದರು. ಬಳಿಕ ರೈಲು ಮಾರ್ಗದ ಮೂಲಕ ದಿಲ್ಲಿಯಿಂದ ಬೆಂಗಳೂರಿಗೆ ಸಾಗಿಸಿ, ನಗರದ ನಿರ್ಜನ ಪ್ರದೇಶಗಳಲ್ಲಿ ಕಾರುಗಳ ಮೂಲಕ ಮಾದಕ ವಸ್ತು ಮಾರಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಹೆಬ್ಬಾಳದ ಆನಂದನಗರದ ಬಳಿ ಮೊದಲಿಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು 4.3 ಕೆ.ಜಿ. ಎಂಡಿಎಂಎ ಜಪ್ತಿ ಮಾಡಿದ್ದರು. ನಂತರ ಸರ್ಜಾಪುರದ ಚೂಡಸಂದ್ರದಲ್ಲಿರುವ ಮೊಹಮ್ಮದ್ ಮನ್ಸೂರ್ ನಿವಾಸದ ಮೇಲೆ ದಾಳಿ ನಡೆಸಿ 10 ಕೆ.ಜಿ. ಎಂಡಿಎಂಎ ವಶಪಡಿಸಿಕೊಂಡರು. ಬಳಿಕ ಹೆಣ್ಣೂರಿನ ಅಬ್ದುಲ್ ಸಮದ್ ಮನೆ ಮೇಲಿನ ಕಾರ್ಯಾಚರಣೆಯಲ್ಲಿ ಮತ್ತಷ್ಟು 3.5 ಕೆ.ಜಿ. ಮಾದಕ ವಸ್ತು ಪತ್ತೆಯಾಗಿದೆ.
ಪ್ರಕರಣದ ವಿಚಾರಣೆ ವೇಳೆ ಈ ಡ್ರಗ್ಸ್ ಜಾಲ ಹೊಸದಿಲ್ಲಿ ಮತ್ತು ಹರಿಯಾಣದವರೆಗೂ ವಿಸ್ತರಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಡಿಸಿಪಿ ಬಿ.ಎಸ್. ನೇಮಗೌಡ ಹಾಗೂ ಜೆ.ಸಿ.ನಗರ ಎಸಿಪಿ ಕೆ.ಎಸ್. ತನ್ವಿರ್ ಮಾರ್ಗದರ್ಶನದಲ್ಲಿ 40ಕ್ಕೂ ಹೆಚ್ಚು ಪೊಲೀಸರ ವಿಶೇಷ ತಂಡ ರಚಿಸಿ, ಒಂದು ವಾರ ಹೊಸದಿಲ್ಲಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

