ಮಂಗಳೂರು, ಜೂನ್ 4: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಚ್.ವಿ. ದರ್ಶನ್ ತಿಳಿಸಿದ್ದಾರೆ.
2026ರ ಅಕ್ಟೋಬರ್ 1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲಿದ್ದಾರೆ.
ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಬಳಿಕ ಸೆಪ್ಟೆಂಬರ್ 4ರವರೆಗೆ ಸಾರ್ವಜನಿಕರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಎಲ್ಲಾ ಅರ್ಜಿಗಳ ಪರಿಶೀಲನೆಯ ಬಳಿಕ ಅಕ್ಟೋಬರ್ 3ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಜಿಲ್ಲೆಯಲ್ಲಿ ಪ್ರಸ್ತುತ 18,05,189 ಮತದಾರರಿದ್ದು, ಅವರಲ್ಲಿ 15,98,723 ಮತದಾರರ ಮಾಹಿತಿಯನ್ನು ಈಗಾಗಲೇ ಮ್ಯಾಪಿಂಗ್ ಮಾಡಲಾಗಿದೆ. ಇದು ಶೇ.88.56ರಷ್ಟು ಪ್ರಗತಿಯನ್ನು ತೋರಿಸುತ್ತದೆ. ಈ ಕಾರ್ಯಕ್ಕಾಗಿ 8 ಮತದಾರರ ನೋಂದಣಾಧಿಕಾರಿಗಳು, 10 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 206 BLO ಮೇಲ್ವಿಚಾರಕರು ಹಾಗೂ 1,876 BLOಗಳನ್ನು ನಿಯೋಜಿಸಲಾಗಿದೆ.
ಮತದಾರರು BLOಗಳಿಂದ ನೀಡಲಾಗುವ Enumeration Form ಅನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಶೈಕ್ಷಣಿಕ ದಾಖಲೆ, ಖಾಯಂ ನಿವಾಸ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಸೇರಿದಂತೆ ಮಾನ್ಯ ದಾಖಲೆಗಳನ್ನು ಸಲ್ಲಿಸಬಹುದಾಗಿದೆ.
ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹರು ಪಟ್ಟಿಗೆ ಸೇರ್ಪಡೆಯಾಗದಂತೆ ಖಚಿತಪಡಿಸಿಕೊಳ್ಳುವುದು ಈ ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮನೆ-ಮನೆ ಭೇಟಿ ಸಂದರ್ಭದಲ್ಲಿ BLOಗಳಿಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

