ಬ್ರಹ್ಮಾವರ, ಮೇ 26: ಸಾರ್ವಜನಿಕರಿಂದ ನಿರಂತರವಾಗಿ ಕೇಳಿಬಂದಿದ್ದ ಭ್ರಷ್ಟಾಚಾರ, ಕಡತಗಳ ವಿಳಂಬ ಹಾಗೂ ಆಡಳಿತಾತ್ಮಕ ಲೋಪಗಳ ಕುರಿತು ಬಂದ ಗಂಭೀರ ದೂರುಗಳ ಹಿನ್ನೆಲೆ, ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬ್ರಹ್ಮಾವರ ತಾಲೂಕು ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿದರು.
ಬೆಂಗಳೂರಿನ ಲೋಕಾಯುಕ್ತ ಮುಖ್ಯ ಕಚೇರಿಯಿಂದ ವಿಶೇಷ ಶೋಧನಾ ವಾರಂಟ್ ಪಡೆದುಕೊಂಡು ನಡೆಸಲಾದ ಈ ಕಾರ್ಯಾಚರಣೆ ಮಂಗಳೂರು ಲೋಕಾಯುಕ್ತ ಎಸ್ಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಜರುಗಿತು. ಉಡುಪಿ ಹಾಗೂ ಮಂಗಳೂರು ಲೋಕಾಯುಕ್ತ ಕಚೇರಿಗಳ ಜಂಟಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್, ರಾಜೇಂದ್ರ ನಾಯ್ಕ್ ಹಾಗೂ ಮಂಗಳೂರು ಲೋಕಾಯುಕ್ತ ಇನ್ಸ್ಪೆಕ್ಟರ್ ಭಾರತಿ ತಂಡದ ನೇತೃತ್ವ ವಹಿಸಿದ್ದರು.
ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಸಾರ್ವಜನಿಕ ಅರ್ಜಿಗಳು, ಜಮೀನು ಸಂಬಂಧಿತ ದಾಖಲೆಗಳು ಹಾಗೂ ದೀರ್ಘಕಾಲದಿಂದ ಬಾಕಿ ಉಳಿದಿದ್ದ ನೂರಾರು ಕಡತಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದರು. ಕೆಲವು ಕಡತಗಳು ನಿಯಮಬಾಹಿರವಾಗಿ ವಿಲೇವಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪರಿಶೀಲನೆಯ ವೇಳೆ ಹಲವು ಆಡಳಿತಾತ್ಮಕ ಲೋಪಗಳು, ದಾಖಲೆ ನಿರ್ವಹಣೆಯ ಅವ್ಯವಸ್ಥೆ ಹಾಗೂ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ. ಈ ಕುರಿತ ಸಮಗ್ರ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ಮತ್ತು ಸಾರ್ವಜನಿಕರ ಸಮಸ್ಯೆಗಳ ವಿರುದ್ಧ ಲೋಕಾಯುಕ್ತರು ಕೈಗೊಂಡಿರುವ ಈ ದಿಟ್ಟ ಕ್ರಮ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.





