ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 31ನೇ ಬಿಜೈ ವಾರ್ಡಿನ ಬಿಜೈ ನ್ಯೂ ರೋಡ್ನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಹಾಗೂ ಫುಟ್ಪಾತ್ ನಿರ್ಮಾಣ ಕಾಮಗಾರಿಗೆ ಶಾಸಕರಾದ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಶನಿವಾರ ಶಿಲಾನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ಬಿಜೈ ಕಾಪಿಕಾಡ್ನಿಂದ ಆನೆಗುಂಡಿಯವರೆಗೆ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆದು ಹೋಗಲು ಅನುಕೂಲವಾಗುವಂತಹ ಉತ್ತಮ ಚರಂಡಿ ಮತ್ತು ಫುಟ್ಪಾತ್ ಅಗತ್ಯವಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಲವು ಬಾರಿ ಮನವಿ ಮಾಡಿದ್ದರು. ಈ ಬೇಡಿಕೆಗೆ ಸ್ಪಂದನೆ ನೀಡಿದ ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಗಾಗಿ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿತ್ತು,” ಎಂದು ಹೇಳಿದರು.
“ಆದರೆ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಅನೇಕ ಅಭಿವೃದ್ಧಿ ಕಾಮಗಾರಿಗಳ ಅನುದಾನಗಳನ್ನು ತಡೆಹಿಡಿದ ಕಾರಣ ಈ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಸಚಿವ ಸತೀಶ್ ಜಾರಕಿಹೊಳಿಯವರನ್ನು ಹಲವು ಬಾರಿ ಭೇಟಿ ಮಾಡಿ ಕಾಮಗಾರಿಯ ಅಗತ್ಯತೆಯನ್ನು ವಿವರಿಸಿದ ಬಳಿಕ ಈಗ ಇದಕ್ಕೆ ಅನುಮೋದನೆ ಲಭಿಸಿದ್ದು, ಕಾಮಗಾರಿ ಆರಂಭವಾಗುತ್ತಿದೆ,” ಎಂದು ಶಾಸಕರು ಮಾಹಿತಿ ನೀಡಿದರು.
ಉಪಸ್ಥಿತರು:
ಈ ಕಾರ್ಯಕ್ರಮದಲ್ಲಿ ಸಂಜಯ್ ಪ್ರಭು, ನಾರಾಯಣ್, ಪ್ರಶಾಂತ್ ಆಳ್ವ, ಜಯಕುಮಾರ್, ಋತ್ವಿಕ್ ಕದ್ರಿ, ಸಂತೋಷ್ ಉಳ್ಳಾಲ್, ಮನೋಜ್, ಜಗದೀಶ್, ವಸಂತ್, ಭರತ್, ದೀಪಿಕಾ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.


